ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ..!

ಕೃಷ್ಣಾ ನದಿಯಲ್ಲಿ ಸಂಕ್ರಾಂತಿ ನಿಮಿತ್ತ ಪುಣ್ಯಸ್ನಾನ ಮಾಡಿದ ಭಕ್ತರು.
ಕೃಷ್ಣಾ ನದಿಯಲ್ಲಿ ಸಂಕ್ರಾಂತಿ ನಿಮಿತ್ತ ಪುಣ್ಯಸ್ನಾನ ಮಾಡಿದ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಗಮನಾಥ, ಐಕ್ಯ ಮಂಟಪ ದರ್ಶನ ಪಡೆದ ಜನತೆ
  • ಭರ್ಜರಿ ವ್ಯಾಪಾರ ವಹಿವಾಟು
  • ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮ
ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸಂಭ್ರಮಿಸಿದರು.
ವಿಶೇಷವಾಗಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ದಿಕ್ಕನ್ನು ಬದಲಿಸುವ ಸಂಕ್ರಮಣದ ಪರ್ವಕಾಲದಲ್ಲಿ ಕುಟುಂಬ ಸಮೇತ ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿ ಸಂಕ್ರಮನದ ಪರ್ವಕಾಲವನ್ನು ಆಚರಿಸಿದರು.
ಪುಣ್ಯಸ್ನಾನದ ಬಳಿಕ ಭಕ್ತರು ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯಮಂಟಪ ದರ್ಶನ ಪಡೆದು ಸಂಭ್ರಮಿಸಿದರು. ಪರಸ್ಪರ ಕುಸರೆಳ್ಳು ವಿನಿಯೋಗ ಮಾಡಿಕೊಂಡು ದೇವಾಲಯ ಒಳ ಹಾಗೂ ಹೊರ ಆವರಣ, ಉದ್ಯಾನವನದಲ್ಲಿ ತಂದ ಸಿಹಿ ತಿಂಡಿಗಳ ಭೋಜನ ಸವಿದರು.
ಕೆಲವು ಭಕ್ತರು ಪುಣ್ಯ ಸ್ನಾನಕ್ಕಾಗಿಯೇ ಬುಧವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿದರೆ, ಇನ್ನೂ ಕೆಲವು ಭಕ್ತರು ಬೆಳಗ್ಗೆ ಬಂದು ಸ್ನಾನ ಮಾಡಿದರು. ಬೆಳಗಿನ ಅವಧಿಯಲ್ಲಿ ಕಡಿಮೆ ಇದ್ದ ಭಕ್ತರ ಸಂಖ್ಯೆ 12 ಗಂಟೆ ನಂತರ ಅಧಿಕಗೊಂಡಿತು. ಸಂಗಮನಾಥನ ದರ್ಶನ ಪಡೆಯಲು ಭಕ್ತರು ಸರದಿಯ ಸಾಲಿನಲ್ಲಿ ನಿಂತರು.
ಶರಣ ಮೇಳಕ್ಕೆ ಬಂದ ಭಕ್ತರು ಜನವರಿ 14ರಂದೇ ಸಂಕ್ರಾಂತಿ ಆಚರಿಸಿದ್ದರಿಂದ 15ರಂದು ಪುಣ್ಯ ಸ್ನಾನಕ್ಕೆಂದು ಆಗಮಿಸಿದ್ದ ಭಕ್ತರು ಮಾತ್ರ ಇದ್ದರು. ಕಳೆದ ವರ್ಷಕ್ಕಿಂತ ಈ ವರ್ಷ ಪುಣ್ಯಸ್ನಾನದ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಪ್ರತಿ ವರ್ಷ ಬಾದಾಮಿ ಬನಶಂಕರಿ, ಸವದತ್ತಿ ಯಲ್ಲಮ್ಮನ ಜಾತ್ರೆ ಮಂಕರ ಸಂಕ್ರಾಂತಿ, ಶರಣ ಮೇಳ ಏಕಕಾಲದಲ್ಲಿ ಬಂದಿರುತ್ತಿದ್ದವು. ಇದರಿಂದ ಅಧಿಕ ಜನಜಂಗುಳಿ ಉಂಟಾಗುತ್ತಿತ್ತು. ಈ ವರ್ಷ ಎಲ್ಲವೂ ಪ್ರತ್ಯೇಕವಾಗಿ ಬಂದಿರುವುದರಿಂದ ಜನಜಂಗುಳಿ ಪ್ರಮಾಣ ಕಡಿಮೆ ಎಂದು ವ್ಯಾಪಾರಸ್ಥರು ಅನಿಸಿಕೆ ವ್ಯಕ್ತಪಡಿಸಿದರು.
ಮಧ್ಯಾಹ್ನ 12ರ ನಂತರ ಸುತ್ತಮುತ್ತಲಿನ ಜಿಲ್ಲೆಯ ಜನರು ಅಧಿಕ ಸಂಖ್ಯೆಯಲ್ಲಿ ಪುಣ್ಯಸ್ನಾನಕ್ಕೆ ಬಂದಿದ್ದರು. ಕೆಲವು ಭಕ್ತರು ಸೂರ್ಯ ಉದಯವಾಗುವುದನ್ನು ನದಿಯ ದಡದಲ್ಲಿ ಕಾಯುತ್ತಾ ಕುಳಿತ್ತಿದ್ದರು. ಸೂರ್ಯ 6:40ಕ್ಕೆ ಉದಯವಾಗುತ್ತಿದಂತೆ ನದಿಯಲ್ಲಿ ಸ್ನಾನ ಮಾಡಿ ಸಂಕ್ರಾಂತಿ ಹಬ್ಬ ಆಚರಿಸಿದರು.
ದ್ವಿಚಕ್ರ ವಾಹನಗಳು ದೇವಾಲಯ ಪ್ರವೇಶ ದ್ವಾರ, ಮಾಹಿತಿ ಕೇಂದ್ರದ ಮುಂದೆ ನಿಲ್ಲಿಸಿದ್ದರಿಂದ ದೇವಾಲಯಕ್ಕೆ ಭಕ್ತರು ಹೊಗಲು ತೊಂದರೆ ಅನುಭವಿಸಿದರು. ದೇವಾಲಯ ಮುಂಭಾಗ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿದ್ದರಿಂದ ದೇವಾಲಯಕ್ಕೆ ತೆರಳಲು ಭಕ್ತರು ತೊಂದರೆ ಅನುಭವಿಸಿದರು.
ದೇವಾಲಯ, ಐಕ್ಯ ಮಂಟಪದ ಒಳ ಹೊರಗೆ ಭಕ್ತರು ಪುಣ್ಯಸ್ನಾನ ಮಾಡಿ ಇಷ್ಟಲಿಂಗಪೂಜೆ, ಪ್ರಾರ್ಥನೆ, ವಚನ ಪಠಣ, ಶಿವನಾಮ ಸ್ಮರಣೆ, ಭಜನೆ ಮಾಡಿದರು. ಸಂಕ್ರಮಣದ ಪುಣ್ಯಸ್ನಾನಕ್ಕೆ ಬಂದ ಅಧಿಕ ಭಕ್ತರು, ವಿಭೂತಿ, ಕುಂಕುಮ, ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದರು. 12 ಗಂಟೆಯಿಂದ ಭಕ್ತರ ಸಂಖ್ಯೆ ಹೆಚ್ಚಿದ ಪರಿಣಾಮ ಮೊಬೈಲ್ ನೆಟ್‌ವರ್ಕ್ ತೊಂದರೆಯಾಗಿ ಕರೆಗಳು ಹೋಗಲಿಲ್ಲ.
ಹುಬ್ಬಳ್ಳಿ ವರದಶ್ರೀ ಫೌಂಡೇಶನ್ ಸಂಸ್ಥೆಯ ಸದಸ್ಯರು ಪುಣ್ಯಸ್ನಾನಕ್ಕೆ ಬರುವ ಭಕ್ತರಿಗೆ ಶಾಂಪು, ಸಾಬೂನಿನ, ವಿಷ ಸ್ನಾನ ಬಿಡಿ, ಕಡ್ಲೆಹಿಟ್ಟಿನಿಂದ ವಿಷ ಮುಕ್ತ ಪುಣಸ್ನಾನ ಮಾಡಿ ಎಂದು ತಿಳಿ ಹೇಳಿ ಕಡ್ಲೆಹಿಟ್ಟಿನ ಪ್ಯಾಕೆಟ್ ಉಚಿತವಾಗಿ ನೀಡಿದರು. ಮಕರ ಸಂಕ್ರಾಂತಿ ನಿಮಿತ್ತ ಬೆಳಗ್ಗೆ 6 ಗಂಟೆಗೆ 100 ಜನ ಕಾರ್ಯಕರ್ತರು ಕೊರಳಲ್ಲಿ ಜಾಗೃತಿ ನಾಮಲ ಹಾಕಿಕೊಂಡು ಬರುವ ಭಕ್ತರಿಗೆ ಕಡ್ಲೆಹಿಟ್ಟಿನ ಪ್ಯಾಕೆಟ್ ನೀಡಿದರು. ವರದಶ್ರೀ ಫೌಂಡೇಶನ್ ಸದಸ್ಯ ಸಿದ್ದು ರಡ್ಡೆರ ಮಾತನಾಡಿ, ರಾಜ್ಯದ 200 ಪುಣ್ಯಕ್ಷೇತ್ರದಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಮಕರ ಸಂಕ್ರಾಂತಿ ನಿಮಿತ್ತ ಸುಕ್ಷೇತ್ರಕ್ಕೆ ಅಧಿಕ ಭಕ್ತರು ಬರುತ್ತಿರುವುದರಿಂದ 100 ಜನ ಬಂದಿದ್ದೇವೆ. ಉಚಿತವಾಗಿ ಕಡ್ಲೆಹಿಟ್ಟಿನ ಪ್ಯಾಕೆಟ್ ಎಲ್ಲರಿಗೂ ನೀಡುತ್ತಿದ್ದೇವೆ. ಈ ವರ್ಷ 25 ಲಕ್ಷ ಪ್ಯಾಕೆಟ್ ತಯಾರಿಸಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net