ಇಳಕಲ್ಲ:ನಗರದ ವಿವಿಧ ವಾರ್ಡ್ಗಳ ಮೂಲ ಸೌಕರ್ಯಗಳಾದ ರಸ್ತೆ, ಸರ್ಕಲ್ ಅಭಿವೃದ್ಧಿಗೆ 5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಬುಧವಾರ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ. ಅನುದಾನದಲ್ಲಿ ಬಸವೇಶ್ವರ ಸರ್ಕಲ್‌ದಿಂದ ಬಸ್ ನಿಲ್ದಾಣದವರೆಗೆ, ಬಸ್ ನಿಲ್ದಾಣದಿಂದ ಕಂಠಿ ಸರ್ಕಲ್‌ವರೆಗೆ, ನಗರಸಭೆ ಕಾರ್ಯಾಲಯದಿಂದ ಕೆವಿಜಿ ಬ್ಯಾಂಕ್‌ವರೆಗೆ ಮತ್ತು ಗೊರಬಾಳ ನಾಕಾ ಬ್ರಿಡ್ಜ್ನಿಂದ ರಾಷ್ಟ್ರೀಯ ಹೆದ್ದಾರಿಯ 50ರ ವರೆಗೆ, ಗೊಂಗಡಶೆಟ್ಟಿ ಕಲ್ಯಾಣ ಮಂಟಪದ ಪಕ್ಕದ ರಸ್ತೆ ಅಭಿವೃದ್ಧಿಪಡಿಸುವುದು.
ನಗರದ ಪ್ರಭಾತಫೆರಿ ರಸ್ತೆಯ ಡಾಂಬರೀಕರಣ ರಸ್ತೆ ಮಾಡುವುದು. ಬಹು ದಿನಗಳ ಬೇಡಿಕೆಯಾಗಿದ್ದ ಹನಮಸಾಗರ ರಸ್ತೆಯಿಂದ ಗುರುಲಿಂಗಪ್ಪ ಕಾಲನಿಯವರೆಗೆ ಡಾಂಬರೀಕರಣ, ಶ್ರೀನಿವಾಸ ಚಿತ್ರ ಮಂದಿರದ ಕ್ರಾಸ್ ದಿಂದ ಬನ್ನಿಮಹಾಂಕಾಳಿ ದೇವಸ್ಥಾನದವರೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
50 ಲಕ್ಷ ರೂ.ಗಳಲ್ಲಿ ಬಸವೇಶ್ವರ ಸರ್ಕಲ್‌ನ್ನು ನವೀಕರಣ ಮಾಡಲಾಗಿದೆ, ಪ್ರವಾಸಿ ಮಂದಿರದ ಎದುರಿನ ಪ್ರಮುಖ ರಸ್ತೆಯಲ್ಲಿಯೇ ಅಶೋಕ ಸ್ತಂಭವನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಅಭಿವೃದ್ಧಿಪಡಿಸುವ ಮುಂದುವರಿದ ಕಾಮಗಾರಿಗಾಗಿ 45 ಲಕ್ಷ ರೂ. ಬಿಡುಗಡೆ ಮಾಡಿದ್ದೇನೆ ಎಂದರು.
ಹಿಂದಿನ ಸರಕಾರ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟು ಹೋಗಿದ್ದವು. ನನ್ನ ಅವಧಿಯಲ್ಲಿ ಎಲ್ಲ ರಸ್ತೆಗಳನ್ನು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು. ಎರಡೂವರೆ ವರ್ಷ ನನ್ನ ಅವಽಯಲ್ಲಿ ನಡೆದ ಅಭಿವೃದ್ಧಿಗಳ ಕುರಿತು ಆದಷ್ಟು ಬೇಗನೆ ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಮೌಲೇಶ ಬಂಡಿವಡ್ಡರ, ಅಮೃತ ಬಿಜ್ಜಳ, ರೇಷ್ಮಾ ಮಾರನಬಸರಿ, ಮಲ್ಲು ಮಡಿವಾಳರ, ರಾಧೆಶ್ಯಾಮ ದರಕ, ಯಲ್ಲಪ್ಪ ರಾಜಾಪೂರ, ಹನಮಂತ ತುಂಬದ, ಅಬ್ಬು ಹಳ್ಳಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಮಹಾಂತೇಶ ಹನಮನಾಳ, ನಗರಸಭೆ ಪೌರಾಯುಕ್ತ ಶ್ರೀನಿವಾಸದ ಜಾಧವ ಇದ್ದರು.