ಕಲಾದಗಿಯಲ್ಲಿ ಕಳಸಕೊಪ್ಪ ಕೆರೆಯಿಂದ ಕಾಲುವೆಗೆ ನೀರು ಬಿಡಲು ಮನವಿ ಮಾಡಿಕೊಳ್ಳಲು ರೈತ ಮುಖಂಡರ ಸಭೆ ನಡೆಯಿತು. ಭೀಮನಗೌಡ ಗೌಡರ, ಹನುಮಂತ ಬಳೂಲದ, ಮಲ್ಲಪ್ಪ ಪಾಣಿಶೆಟ್ಟರ, ರುಕ್ಮು ಸೌಧಾಗರ, ಯಲ್ಲಪ್ಪ ಕುಳಗೇರಿ, ಬಾಪು ಚವಾಣ್, ತಿಪ್ಪಣ್ಣ ಬೀಡಕಿ ಇದ್ದರು.
ನೀರಿಲ್ಲದೆ ಕಾಲುವೆ ವ್ಯಾಪ್ತಿಯ ಜಮೀನುಗಳಲ್ಲಿನ ಸಲುಗಳು ಒಣಗುತ್ತಿವೆ
ಕಲಾದಗಿ: ನೀರಿಲ್ಲದೆ, ಮಳೆಯಿಲ್ಲದೆ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕಳಸಕೊಪ್ಪ ಕೆರೆಯಿಂದ ಕಾಲುವೆಗೆ ನೀರು ಬಿಡಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಅವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲು ಗುರುವಾರದಂದು ಗ್ರಾಮದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ರೈತ ಮುಖಂಡ ಸಂಗಣ್ಣಾ ಮುದೋಳ ಮಾತನಾಡಿ, ಕಳೆದ ಹದಿನೈದು ದಿನಗಳಹಿಂದೆ ಒಂದೆರೆಡುದಿನ ಮಾತ್ರ ಕಳಸಕೊಪ್ಪ ಕಡೆರೆಯಿಂದ ಕಾಲುವೆಗೆ ನೀರು ಹರಿಸಲಾಯಿತು, ಆನಂತರ ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ನೀರನ್ನು ಏಕಾಏಕಿ ನಿಲ್ಲಿಸಿದ್ದರಿಂದ ನೀರಿಲ್ಲದೆ ಕಾಲುವೆ ವ್ಯಾಪ್ತಿಯ ಜಮೀನುಗಳಲ್ಲಿನ ಸಲುಗಳು ಒಣಗುತ್ತಿವೆ ಎಂದು ಕಳವಳ ವ್ಯಕ್ತಮಾಡಿದರು.
ಬಿರು ಬೇಸಿಗೆ ಈ ದಿನಗಳಲ್ಲಿ ಮಳೆಯೂ ಬಾರದಿರುವುದರಿಂದ ಅಂತರ್ಜಲ ಕುಸಿದಿರುವುದುರಿಂದ ಸಲುಗಳಿಗೆ ನೀರುಣಿಸುವುದೇ ಹರಸಾಹಸವಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಕಳಸಕೊಪ್ಪ ಕೆರೆಯ ನೀರನ್ನು ಕಾಲುವೆಗೆ ಹರಿಸಿದರೆ ಕೊಳವೇ ಭಾವಿಗಳಲ್ಲಿಯೂ ನೀರು ಬರಲಿದೆ. ಈ ವ್ಯಾಪ್ತಿಯ ಬೆಳೆಗಳಿಗೂ ನೀರು ಉಣಿಸಲು ಅನುಕೂಲವಾಗುತ್ತದೆ ಎಂಬ ಒಟ್ಟಾರೆಭಿಪ್ರಾಯ ಸಭೆಯಲ್ಲಿ ಕೇಳಿಬಂತು.
ಮನವಿಗೆ ನಿರ್ಧಾರ
ಕಳಸಕೊಪ್ಪ ಕೆರೆಯಿಂದ ಕಾಲುವೆ ನೀರು ಬಿಡಲು ಮನವಿ ಮಾಡಿಕೊಳ್ಳಲು ಎಲ್ಲಾ ರೈತರು ಮಾನ್ಯ ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿಗಳನ್ನು ಮೇ 8 ರಂದು ಭೇಟಿಯಾಗಲು ಸಭೆಯಲ್ಲಿ ನಿರ್ದರಿಸಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಭೀಮನಗೌಡ ಗೌಡರ, ಹನುಮಂತ ಬಳೂಲದ, ಮಲ್ಲಪ್ಪ ಪಾಣಿಶೆಟ್ಟರ, ರುಕ್ಮು ಸೌಧಾಗರ, ಯಲ್ಲಪ್ಪ ಕುಳಗೇರಿ, ಬಾಪು ಚವ್ಹಾಣ, ತಿಪ್ಪಣ್ಣ ಬೀಡಕಿ ಇದ್ದರು.