ಸರ್ಕಾರಿ ಖಾಲಿ ಹುದ್ದೆ ಭರ್ತಿಗೆ ಆಗ್ರಹ

 ರಬಕವಿ-ಬನಹಟ್ಟಿ ತಾಲೂಕು ತಹಸೀಲ್ದಾರರಿಗೆ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ಶಿವಲಿಂಗ ಟಿರಕಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ ಮತ್ತಿತರರು ಉಪಸ್ಥಿತರಿದ್ದರು.
ರಬಕವಿ-ಬನಹಟ್ಟಿ ತಾಲೂಕು ತಹಸೀಲ್ದಾರರಿಗೆ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ಶಿವಲಿಂಗ ಟಿರಕಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರಿಂದ ಹೋರಾಟ ಎಚ್ಚರಿಕೆ
  • ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು
  • ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ
ರಬಕವಿ/ಬನಹಟ್ಟಿ: ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಇಲ್ಲವಾದರೆ ರಾಜ್ಯದಾದ್ಯಂತ ಯುವಕರ ಹೋರಾಟ ಅನಿವಾರ್ಯವಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಗುರುವಾರ ಸಂಜೆ ನಡೆದ ಯುವ ಅಧಿವೇಶನದಲ್ಲಿ ಮಾತನಾಡಿದ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಬಡ ಕುಟುಂಬಗಳ ಯುವಕರು ರಾಜಕೀಯದ ಬಲಿಪಶುವಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿ ಇದ್ದರೂ, ನೇಕಾರರು 70-80 ವರ್ಷಗಳಾದರೂ ದುಡಿಯಲೇಬೇಕಾದ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು. ಜನರಿಂದ ಆಯ್ಕೆಯಾಗುವ ಶಾಸಕರು ಬಂಡವಾಳಶಾಹಿಗಳಾಗುತ್ತಿರುವ ಸಂಸ್ಕೃತಿಗೆ ಅಂತ್ಯ ಬರಬೇಕು. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರೇ ಪ್ರತಿನಿಧಿಸಬೇಕು ಎಂದು ಆಗ್ರಹಿಸಿದರು.
ಎಎಪಿ ಮುಖಂಡ ಹಾಗೂ ನ್ಯಾಯವಾದಿ ಅರ್ಜುನ ಹಲಗಿಗೌಡರ ಮಾತನಾಡಿ, ರಾಜಕಾರಣಿಗಳ ನೀತಿಗಳಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆ ದುರ್ಬಲವಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರ ಹಾಗೂ ದೇಶದಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್ ಆಗಿರುವುದು ಕಳವಳಕಾರಿ ಸಂಗತಿ. ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸದಿದ್ದರೆ ಗ್ರಾಮೀಣ ಮಟ್ಟದಲ್ಲೂ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.
ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇರುವುದರಿಂದ ಅವುಗಳನ್ನು ತಕ್ಷಣ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿರುವ ಕಾರಣ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಸಮರ್ಪಕ ಸೇವೆಗಳು ಸಿಗುತ್ತಿಲ್ಲ ಎಂದು ಹೇಳಿದರು. ಇಂದಿನ ಆರ್ಥಿಕ ನೀತಿಗಳು ಮತ್ತು ಸಾಲಾಧಾರಿತ ಬಜೆಟ್ ವ್ಯವಸ್ಥೆಯ ಬಗ್ಗೆ ಕೂಡ ಅವರು ಪ್ರಶ್ನೆ ಎತ್ತಿದರು.
ಮಹಾನಿಂಗ ಮಾಯನ್ನವರ, ಪ್ರವೀಣ ಹೆಗ್ಗಳಗಿ, ಶಿಕ್ಷಕ ಶ್ರೀಶೈಲ ಬಿರಾದಾರ, ಸಿತಾರಾಂ ಮಾದರ ಸೇರಿ ಹಲವು ಸಂಘಟನೆಗಳ ಮುಖಂಡರು ಮಾತನಾಡಿದರು. ಮಾಳು ಹಿಪ್ಪರಗಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಮಂತ್ರಿ ಅವರಿಗೆ ಸಲ್ಲಿಸಲು ರಚಿಸಿದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಸತೀಶಕುಮಾರ ಗೌಡಾ ಅವರಿಗೆ ಮುಖಂಡರು ನೀಡಿದರು. ನೇಕಾರರು, ರೈತ ಮುಖಂಡರು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net