ಇಳಕಲ್ಲದ ಕಂಠಿ ವೃತ್ತದಲ್ಲಿ ರೈತರ ವಿವಿಧ ಬೇಡಿಕೆಗಳ ಕುರಿತು ತಹಸೀಲ್ದಾರ ಅಮರೇಶ ಪಮ್ಮಾರ ಹಾಗೂ ಹುನಗುಂದ ಎಡಿಎ ಸೋಮಲಿಂಗಪ್ಪ ಅಂಟರದಾನಿ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಶಶಿಕಾಂತ ಬಂಡರಗಲ್ಲ, ಗುರು ಗಾಣಿಗೇರ, ಬಸವನಗೌಡ ಪಾಟೀಲ, ರಾಜಶೇಖರ ಹುಡೇದಮನಿ ಇತರರಿದ್ದರು.
ಇಳಕಲ್ಲ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಇಳಕಲ್ಲ-ಹುನಗುಂದ ಅವಳಿ ತಾಲೂಕಿನಲ್ಲಿ ಬಿತ್ತನೆಯಾದ ಬೆಳೆಗಳು ಒಣಗುತ್ತಿದ್ದು, ಈ ಎರಡೂ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಬಳಿಕ ತಹಸೀಲ್ದಾರ್ ಅಮರೇಶ ಪಮ್ಮಾರ ಹಾಗೂ ಹುನಗುಂದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ (ಎಡಿಎ) ಸೋಮಲಿಂಗಪ್ಪ ಅಂಟರದಾನಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಬಸವರಾಜ ಹುಡೇದಮನಿ ಮಾತನಾಡಿ, ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಕೊರತೆಯಿಂದ ನಾಶವಾಗುತ್ತಿದ್ದು, ರೈತರ ಬೆಳೆಸಾಲ ಮನ್ನಾ ಮಾಡಬೇಕು. 2025-26ನೇ ಸಾಲಿನ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸಂಬಂಧಿಸಿದ ಬೆಳೆ ವಿಮೆ ಮೊತ್ತವನ್ನು ಇನ್ನೂ ರೈತರ ಖಾತೆಗೆ ಜಮಾ ಮಾಡಿಲ್ಲ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಸನಗೌಡ ಪಾಟೀಲ ಮಾತನಾಡಿ, 2026-27ನೇ ಸಾಲಿನ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ತಾಂತ್ರಿಕ ದೋಷಗಳಿರುವುದರಿಂದ ರೈತರು ಸ್ವತಃ ಬೆಳೆ ಸಮೀಕ್ಷೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆ್ಯಪ್‌ನ ದೋಷಗಳನ್ನು ಶೀಘ್ರ ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಎಡಿಎ ಸೋಮಲಿಂಗಪ್ಪ ಅಂಟರದಾನಿ ಮಾತನಾಡಿ, ಅವಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅಗತ್ಯ ಮಾರ್ಗಸೂಚಿಗಳು ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದರು.
ತಹಸೀಲ್ದಾರ್ ಅಮರೇಶ ಪಮ್ಮಾರ ಮಾತನಾಡಿ, ರೈತರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಲಾಗುವುದು. ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ತಾಲೂಕು ಅಧ್ಯಕ್ಷ ಬಸವನಗೌಡ ಪೈಲ್, ಕಾರ್ಯಾಧ್ಯಕ್ಷ ರಸೂಲಸಾಬ ತಹಸೀಲ್ದಾರ, ಮಹಾಲಿಂಗಪ್ಪ ಅವಾರಿ, ಶರಣಗೌಡ ಕಂದಕೂರ, ರಾಜಮಹಮ್ಮದ ನದಾಫ್, ಶಶಿಕಾಂತ ಪಾಟೀಲ, ತೋಟಪ್ಪ ತೋಪಲಕಟ್ಟಿ, ಶರಣಪ್ಪ ಮೇರಾಖೋರ, ದೊಡ್ಡಪ್ಪ ಕವಡಿಮಟ್ಟಿ ಸೇರಿ ಹಲವರು ಭಾಗವಹಿಸಿದ್ದರು.