ಕರ ವಸೂಲಿ ಪೂರ್ಣಗೊಳಿಸಲು ಗಡುವು

 ಬಾಗಲಕೋಟೆ ಜಿಪಂ ನೂತನ ಸಭಾಭವನದಲ್ಲಿ ಮಂಗಳವಾರ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಕರ ವಸೂಲಾತಿ ಪ್ರಗತಿ ಪರಿಶೀಲನೆ ನಡೆಯಿತು.
ಬಾಗಲಕೋಟೆ ಜಿಪಂ ನೂತನ ಸಭಾಭವನದಲ್ಲಿ ಮಂಗಳವಾರ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಕರ ವಸೂಲಾತಿ ಪ್ರಗತಿ ಪರಿಶೀಲನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಕುರೇರ ಸೂಚನೆ
  • ಪ್ರಗತಿ ಪರಿಶೀಲನಾ ಸಭೆ
  • ಫೆಬ್ರವರಿ ಅಂತ್ಯದೊಳಗೆ ಕರ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು
ಬಾಗಲಕೋಟೆ: ಬರುವ ಫೆಬ್ರವರಿ ಅಂತ್ಯದೊಳಗೆ ಕರ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರಕರ ವಸೂಲಿಗಾರರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ ವಸೂಲಾತಿ 2025-26ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿವಾರು ಪ್ರತಿ ದಿನ ನಿರಂತರವಾಗಿ ಮನೆ ಭೇಟಿ ಮಾಡುವ ಮೂಲಕ ಕರ ವಸೂಲಿ ಮಾಡಿ ಪ್ರತಿಶತ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕು. ಇದು ಜಿಲ್ಲೆಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಇದಕ್ಕೆ ನಾಗರಿಕರ ಸಹಕಾರವೂ ಅಗತ್ಯ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡಿ, ಗುರಿ ಆಧಾರಿತ ಕಾರ್ಯಯೋಜನೆಯ ಮೂಲಕ ಉತ್ತಮ ಲಿತಾಂಶ ಪಡೆಯಲಾಗಿದೆ ಎಂದರು.

ಜಾಗೃತಿ ಅಭಿಯಾನ ಕೈಗೊಳ್ಳಿ

ಆನ್‌ಲೈನ್ ಪಾವತಿ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ಅನುಷ್ಠಾನದಿಂದ ತೆರಿಗೆ ಪಾವತಿ ಸುಲಭವಾಗಿ ಸಮಯಕ್ಕೆ ಸರಿಯಾಗಿ ನಡೆಯಬೇಕು. ತೆರಿಗೆ ಬಾಕಿದಾರರ ಕುರಿತು ಜಾಗೃತಿ ಅಭಿಯಾನ, ಮನೆ ಮನೆಗೆ ಭೇಟಿ ಹಾಗೂ ಸಭೆಗಳ ಮೂಲಕ ಸಾರ್ವಜನಿಕರಲ್ಲಿ ತೆರಿಗೆ ಪಾವತಿಯ ಮಹತ್ವವನ್ನು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಬಾಗಲಕೋಟೆ ಮತ್ತು ಜಮಖಂಡಿ ಉಪ ವಿಭಾಗದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-1 ಸೆಕ್ರೆಟರಿಗಳಿಗೆ ಹಾಗೂ ಕರ ವಸೂಲಾತಿಗಾರರಿಗೆ ಮತ್ತು ಸಹಾಯಕ ನಿರ್ದೇಶಕರುಗಳಿಗೆ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕುವಾರು ಪ್ರಗತಿ ವಿವರ

ಜಮಖಂಡಿ ಉಪವಿಭಾಗ ಮಟ್ಟದಲ್ಲಿ ಬರುವ ಮುಧೋಳ, ಬೀಳಗಿ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕು ಪೈಕಿ ಮುಧೋಳ ಶೇ.56.5, ಜಮಖಂಡಿ ಶೇ.57.2, ಬೀಳಗಿ 57.5 ಹಾಗೂ ರಬಕವಿ ಬನಹಟ್ಟಿ 67.9 ರಷ್ಟು ಕಡಿಮೆ ಪ್ರಗತಿ ಸಾಧಿಸಿರುವ ತಾಲೂಕುಗಳಾಗಿವೆ. ಇನ್ನುಳಿದ ಎರಡು ತಿಂಗಳಲ್ಲಿ ಶೇ.100 ರಷ್ಟು ತೆರಿಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸಲು ಕುರೇರ ಸೂಚಿಸಿದರು.
ಜಿಲ್ಲೆಯ ಬಾಗಲಕೋಟೆ ಉಪವಿಭಾಗದಲ್ಲಿ ಬರುವ ಹುನಗುಂದ ಶೇ.42, ಇಳಕಲ್ಲ ಶೇ.48, ಬಾದಾಮಿ ಶೇ.73.2, ಬಾಗಲಕೋಟೆ ಶೇ.64.6 ಮತ್ತು ಗುಳೇದಗುಡ್ಡ ತಾಲೂಕಿನಲ್ಲಿ ಶೇ.76.6 ರಷ್ಟು ಪ್ರಗತಿ ಸಾಧಿಸಿದ್ದು, ಪ್ರತಿಯೊಂದು ತಾಲೂಕಿಗೆ ಸಂಬಂಧಿಸಿದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-1 ಸೆಕ್ರೇಟರಿಗಳಿಗೆ ಮತ್ತು ಕರ ವಸೂಲಾತಿಗಾರರಿಗೆ ಸೂಚನೆ ನೀಡಿದರು.
ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಹಾಗೂ ಕರ ವಸೂಲಾತಿಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಪ್ರಸಕ್ತ ಆರ್ಥಿಕ ವರ್ಷದ ಮುಕ್ತಾಯಕ್ಕೆ ಪೂರ್ವ ಶೇ.100 ರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net