ಕುಡಿವ ನೀರಿಗೆ ತೊಂದರೆಯಾದರೆ ಡಿಸಿ, ಸಿಇಒ ನೇರ ಹೊಣೆ

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ವಿಷಯದ ಕುರಿತು ಸಭೆ ನಡೆಯಿತು. ಜಿಲ್ಲೆಯ ಶಾಸಕರು, ಅಧಿಕಾರಿಗಳು ಇದ್ದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ವಿಷಯದ ಕುರಿತು ಸಭೆ ನಡೆಯಿತು. ಜಿಲ್ಲೆಯ ಶಾಸಕರು, ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ ನಿನೊ ಎಫೆಕ್ಟ್ ಎಲ್ಲಿವರೆಗೋ ಗೊತ್ತಿಲ್ಲ
  • ಹೊಸ ಕೊಳವೆಬಾವಿ ಕೊರೆಯುವುದು ತಕ್ಷಣದ ಪರಿಹಾರವಲ್ಲ
  • ಯುದ್ಧೋಪಾದಿಯಲ್ಲಿ ಖಾಸಗಿ ಕೊಳವೆಬಾವಿ ಗುರುತಿಸಿ, ಗುತ್ತಿಗೆ ಪಡೆಯಿರಿ
  • ಸಚಿವ ಎಂ.ಬಿ. ಪಾಟೀಲ ಖಡಕ್ ಸೂಚನೆ
  • ಬೇರೆಯವರ ಕಡೆ ಬೆರಳು ತೋರಿಸಿದರೆ ಸುಮ್ಮನಿರಲ್ಲ
  • ವಿಪತ್ತು ನಿರ್ವಹಣೆ ಸಭೆ
ಬಾಗಲಕೋಟೆ: ರಾಜ್ಯ, ದೇಶ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ತಟ್ಟಿರುವ ಎಲ್ ನಿನೊ ಪರಿಣಾಮ ಇನ್ನು ಎಷ್ಟು ತಿಂಗಳು ಇರುತ್ತದೆಯೋ ನಮಗೆ ಗೊತ್ತಿಲ್ಲ. ಹಿಂದೆಂದೂ ಇಂಥ ಪರಿಸ್ಥಿತಿ ಎದುರಾಗಿರಲಿಲ್ಲ. ಹೀಗಾಗಿ ಕುಡಿವ ನೀರೆಲ್ಲ ಖಾಲಿಯಾದ ಬಳಿಕ ಓಡಾಡುವ ಬದಲಿಗೆ ಇಂದಿನಿಂದಲೇ ಯುದ್ಧೋಪಾದಿಯಲ್ಲಿ ನೀರಿಗೆ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿ.ಪಂ. ಸಭಾ ಭವನದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣೆ ವಿಷಯದ ಕುರಿತ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಪ್ಪರಗಿ ಜಲಾಶಯ ಅವಲಂಬಿತ ಪ್ರದೇಶಗಳಿಗೆ ಮುಂದಿನ 15 ದಿನ ಹಾಗೂ ಹಿಡಕಲ್ ಜಲಾಶಯ ಅವಲಂಬಿತ ಗ್ರಾಮಗಳಿಗೆ ಮುಂದಿನ 10 ದಿನ ಹಾಗೂ ನವೀಲುತೀರ್ಥ ಜಲಾಶಯ ಅವಲಂಬಿತ ಗ್ರಾಮಗಳಿಗೆ 15 ಮಾತ್ರ ನೀರು ಲಭ್ಯವಾಗಲಿದೆ ಎನ್ನುವ ಮಾಹಿತಿಯನ್ನು ಸಚಿವರು ಪಡೆದುಕೊಂಡರು.
ನೀರು ಖಾಲಿಯಾದ ಬಳಿಕ ಮುಂದೇನು? ಹೊಸ ಕೊಳವೆಬಾವಿ ಕೊರೆಸುವುದು ತಕ್ಷಣಕ್ಕೆ ಪರಿಹಾರವಲ್ಲ, ಅದು ಕೊನೆಯ ಆಯ್ಕೆ ಆಗಬೇಕು. ಕೊಳವೆಬಾವಿ ಕೊರೆದು, ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ, ನೀರು ಪೂರೈಸಲು ಕನಿಷ್ಠ ಎರಡ್ಮೂರು ತಿಂಗಳು ಆಗುತ್ತದೆ. ಆದರೆ, ಸದ್ಯದ ಸ್ಥಿತಿ ಆ ರೀತಿಯಲ್ಲಿ ಇಲ್ಲ. ಹೀಗಾಗಿ ಪ್ರತಿ ಗ್ರಾಮ, ಪಟ್ಟಣ, ನಗರ ಪ್ರದೇಶದಲ್ಲಿ ಲಭ್ಯ ಇರುವ ಖಾಸಗಿ ಕೊಳವೆಬಾವಿ, ಬಾವಿಗಳನ್ನು ಗುರುತಿಸಿ, ಮಾಲೀಕರ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಕುಡಿವ ನೀರಿಗೆ ಯಾರೂ ಇಲ್ಲ ಎನ್ನಲ್ಲ. ಗ್ರಾಮಗಳಿಗೆ ಹೋಗಿ ಅಲ್ಲಿನ ಹಿರಿಯರ ಸಮಕ್ಷಮ ಉತ್ತಮ ಇಳುವರಿ ಇರುವ ಖಾಸಗಿ ಕೊಳವೆಬಾವಿಗಳು ಮತ್ತು ತೆರೆದ ಬಾವಿಗಳನ್ನು ಗುತ್ತಿಗೆ ಪಡೆಯಬೇಕು. ಇದು ನಾಳೆ, ನಾಡದ್ದು ಮಾಡಿದರಾಯಿತು ಎನ್ನುವಂತಿಲ್ಲ. ಈಗಿನಿಂದಲೇ ಪ್ರಾರಂಭ ಮಾಡಬೇಕು ಎಂದರು.
ಈ ವೇಳೆ ಕೆಲ ಅಧಿಕಾರಿಗಳು ಅದು, ಇದು ಎಂದು ಒಬ್ಬರತ್ತ ಮತ್ತೊಬ್ಬರ ಕಡೆಗೆ ಬೆರಳು ತೋರಿಸುತ್ತಿರುವುದನ್ನು ಗಮನಿಸಿದ ಸಚಿವ ಎಂ.ಬಿ. ಪಾಟೀಲ ಅವರು, ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸುವುದನ್ನು ಬಿಟ್ಟು ಬಿಡಬೇಕು. ಕುಡಿವ ನೀರಿನ ತೊಂದರೆ ಉಂಟಾದರೆ ಅದಕ್ಕೆ ಆಯಾ ಇಲಾಖೆ ಮುಖ್ಯಸ್ಥರು ಹೊಣೆ. ಪರಿಸ್ಥಿತಿಯನ್ನು ಸಮರ್ಥವಾಗಿ ಡಿಸಿ ಮತ್ತು ಜಿಪಂ ಸಿಇಒ ನಿರ್ವಹಿಸಬೇಕು. ಆ ಸಾಮರ್ಥ್ಯ ಇದೆಯೋ? ಇಲ್ಲವೋ? ಎಂದು ಪ್ರಶ್ನಿಸಿದ ಸಚಿವರು, ತೊಂದರೆ ಉಂಟಾದರೆ ಮೊದಲ ಹೊಣೆಯನ್ನು ಜಿಲ್ಲಾಽಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಮಾಡುತ್ತೇನೆ ಎಂದು ಎಚ್ಚರಿಸಿದರು.
ಜಿಲ್ಲೆಗೆ ಕುಡಿವ ನೀರು ಲಭ್ಯವಾಗುವ ಜಲಾಶಯ, ಬ್ಯಾರೇಜ್, ಕೆರೆಗಳು, ಲಭ್ಯ ಇರುವ ಕೊಳವೆ ಬಾವಿಗಳ ಸಂಖ್ಯೆಗಳನ್ನು ಪರಿಶೀಲಿಸಿದ ಸಚಿವರು, ಪರಿಸ್ಥಿತಿ ಗಂಭೀರಾಗಿದೆ. ನಗರ ಪ್ರದೇಶಕ್ಕಿಂತ ನದಿ ಅವಲಂಬಿತ ಗ್ರಾಮಗಳಲ್ಲಿ ಹಾಗೂ ಬಹು ಗ್ರಾಮ ಕುಡಿವ ನೀರಿನ ಯೋಜನೆಗಳಿಗೆ ನೀರಿನ ಅಭಾವ ಉಂಟಾಗಲಿದೆ. ಜನರಿಗೆ ಮೊದಲು ಕುಡಿವ ನೀರಿನ ವ್ಯವಸ್ಥೆ ಮಾಡುವುದು ಎಲ್ಲರ ಕರ್ತವ್ಯ. ಆ ಬಗ್ಗೆ ಗಮನ ಹರಿಸಬೇಕು. ಬಳಕೆ ನೀರಿಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಕೃಷಿಗೆ ನೀರು ಸಾಧ್ಯವೇ ಇಲ್ಲ

ಸಭೆಯಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರು ರೈತರು ನದಿ ನೀರು ಬಿಡಿಸುವಂತೆ ಕೋರುತ್ತಿದ್ದಾರೆ ಎಂದರು. ಆಗ ತಕ್ಷಣವೇ ಮಧ್ಯ ಪ್ರವೇಶಿಸಿದ ಸಚಿವ ಎಂ.ಬಿ.ಪಾಟೀಲ, ಸದ್ಯ ಇದು ಸಾಧ್ಯವಿಲ್ಲ. ಮೊದಲು ಕುಡಿಯಲು ನೀರಿನ ಅಭಾವ ಇದೆ. ಕೃಷಿಗೆ ಎಲ್ಲಿಂದ ನೀರು ತರುವುದು. ನಮಗೂ ಒತ್ತಡ ಇದೆ, ನಿಮಗೂ ಒತ್ತಡ ಇದೆ. ಆದರೆ, ವಾಸ್ತವ ಪರಿಸ್ಥಿತಿ ತಿಳಿಸಿ ಅವರಿಗೆ ಎಂದರು.
ನೀರು ಬಿಟ್ಟರೆ ಯಾರು ಸುಮ್ಮನಿರಲ್ಲ, ಕೃಷಿಗೆ ಬಳಕೆ ಮಾಡುತ್ತಾರೆ. ವಿದ್ಯುತ್ ಕಟ್ ಮಾಡಿದರೂ ಆಯಿಲ್ ಇಂಜಿನ್ ಹಚ್ಚಿ ನೀರು ತೆಗೆದುಕೊಳ್ಳುತ್ತಾರೆ ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ವಾಸ್ತವ ಸ್ಥಿತಿಯನ್ನು ಸಭೆಯಲ್ಲಿ ಬಿಚ್ಚಿಟ್ಟರು.
ಹಾಗೆ ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕು. ಕುಡಿಯಲು ಮುಂದಿನ 15 ದಿನ ಮಾತ್ರ ನೀರು ಇದೆ. ಆಲಮಟ್ಟಿ, ಹಿಡಕಲ್, ನವೀಲುತೀರ್ಥದಲ್ಲಿ ಅಲ್ಪಸ್ವಲ್ಪ ನೀರು ಇದೆ. ಆದರೆ, ಹಿಪ್ಪರಗಿ, ಚಿಕ್ಕಪಡಸಲಗಿ, ಗಲಗಲಿ ಬ್ಯಾರೇಜ್ ಖಾಲಿ ಆಗಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು. ಅಽಕಾರಿಗಳು ಒಂದಷ್ಟು ದಿನ ಹಗಲು, ರಾತ್ರಿ ಕೆಲಸ ಮಾಡಿ, ಮೊದಲು ಖಾಸಗಿ ಕೊಳವೆಬಾವಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಗುರುತಿಸಿ ಎಂದರು.
ಆಗ ತೇರದಾಳ ಶಾಸಕ ಸಿದ್ದು ಸವದಿ ಅವರು, ಖಾಸಗಿ ಕೊಳವೆಬಾವಿ ನೀಡುವ ರೈತರಿಗೆ ವಿದ್ಯುತ್ ಬಿಲ್ ಪಾವತಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಗಮನ ಸೆಳೆದರು.
ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು. ಸದ್ಯ ಆ ನಿಯಮಗಳು ಏನಿವೆ? ಎಂದು ಸರಿಯಾಗಿ ನೋಡಿ ಕ್ರಮ ತೆಗೆದುಕೊಳ್ಳುವಂತೆ ಡಿಸಿ ಮತ್ತು ಸಿಇಒ ಅವರಿಗೆ ಸಚಿವರು ನಿರ್ದೇಶನ ನೀಡಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮುಧೋಳ ಶಾಸಕ ಆರ್.ಬಿ. ತಿಮ್ಮಾಪೂರ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ರಾಜ್ಯ ಕೈಗಾರಿಕೆ ಮೂಲ ಸೌಕರ್ಯಗಳ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಜಿಲ್ಲಾಧಿಕಾರ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ಧಾರ್ಥ ಗೋಯಲ್ ಮತ್ತಿತರರು ಇದ್ದರು.

ಹೊರ ರಾಜ್ಯಕ್ಕೆ ಮೇವು ಸಾಗಣೆ ಆಗಬಾರದು

ಸಭೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಸುರಿದ ಮಳೆ, ಬಿತ್ತನೆ ಪ್ರಮಾಣ, ಬೀಜ ಗೊಬ್ಬರಗಳ ಸಂಗ್ರಹ, ವಿತರಣೆ ಹಾಗೂ ಜಾನುವಾರುಗಳ ಮೇವು ಲಭ್ಯತೆ, ಪೂರ್ವ ಮುಂಗಾರು ಮತ್ತು ಮುಂಗಾರು ಅವಽಯಲ್ಲಿ ಅತೀವೃಷ್ಟಿಯಿಂದ ಹಾನಿಯಾದ ಮಾಹಿತಿ ಸಂಗ್ರಹಿಸಿದರು. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಮೇವು ಹೊರರಾಜ್ಯಕ್ಕೆ ಸಾಗಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಿಸಿ ಕ್ಯಾಮರಾ ಅಳವಡಿಸಿ ಎಂದು ಸಚಿವ ಪಾಟೀಲ ಅವರು ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net