ಮಕ್ಕಳ ಭವಿಷ್ಯ ರೂಪಿಸಲು ಪೂರಕ ವಾತಾವರಣ ಕಲ್ಪಿಸಿ

ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಹೇಳಿಕೆ
  • ಪ್ರಗತಿ ಪರಿಶೀಲನಾ ಸಭೆ
ಬಾಗಲಕೋಟೆ: ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ನೋಂದಣಿಯಾದ ಮಕ್ಕಳ ಭವಿಷ್ಯ ರೂಪಿಸಲು ಪೂರಕ ವಾತಾವರಣ ಕಲ್ಪಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.
ಮಕ್ಕಳು ತಮ್ಮ ಬಾಲ್ಯಾವ್ಯಸ್ಥೆಯನ್ನು ಉತ್ತಮವಾಗಿ ಅನುಭವಿಸಿ, ಶಿಕ್ಷಣ ಪಡೆದು ವಿಕಸನ ಹೊಂದಲು ಅನುಕೂಲವಾಗುವಂತೆ ಸರ್ಕಾರ ಅನೇಕ ಕಾಯ್ದೆ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಮಕ್ಕಳ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಪ್ರಾಯೋಜಕತ್ವ ಕಾರ್ಯಕ್ರಮದಡಿಯಲ್ಲಿ ಜೈಲಿನಲ್ಲಿರುವ ಪೋಷಕರ ಮಕ್ಕಳ ಮಾಹಿತಿ ಪಡೆದು ಅಂತಹ ಮಕ್ಕಳು ಕುಟುಂಬದ ವಾತಾವರಣದಲ್ಲಿ ಬೆಳೆಯಲು ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಪ್ರತಿ ತಿಂಗಳು ನೀಡುತ್ತಿರುವ 4 ಸಾವಿರ ರೂ. ಗಳ ಆರ್ಥಿಕ ಸಹಾಯ ಧನ ತಲುಪಿಸುವ ಕೆಲಸವಾಗಬೇಕು. ವಿಶೇಷ ಪಾಲನೆ ಯೋಜನೆಯಡಿ ಎಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ, ವೈದ್ಯಕೀಯ ವೆಚ್ಚಕ್ಕಾಗಿ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ರೂ. ಗಳ ಸಹಾಯ ಧನ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣ ತಡೆಗಟ್ಟಲು ಎಲ್ಲ ಇಲಾಖೆಗಳು ಆದ್ಯತೆ ಮೇರೆಗೆ ಕ್ರಮವಹಿಸಬೇಕು. ಕಳೆದ ಮೂರು ವರ್ಷಗಳ ಪ್ರಕರಣಗಳ ಅವಲೋಕನ ನಡೆಸಿ ಅತೀ ಹೆಚ್ಚು ಪ್ರಕರಣಗಳು ನಡೆಯುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶದಲ್ಲಿ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳು ಹೆಚ್ಚಾಗಿ ಬಾಲ್ಯವಿವಾಹ, ಪೋಕ್ಸೋ ಸಂತ್ರಸ್ತರಾಗಿ ಕಂಡುಬರುತ್ತಿದ್ದು, ಇದರ ತಡೆಗೆ ಶಿಕ್ಷಣ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕು. ಮನೆ ಮನೆ ಪೊಲೀಸ್ ಕಾರ್ಯಕ್ರಮದಲ್ಲಿ ಇವುಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಡಾ. ವೀಣಾ ಅವರು, ಪ್ರಾಯೋಜಕತ್ವ, ವಿಶೇಷ ಪಾಲನಾ ಯೋಜನೆ, ದತ್ತು ಕಾರ್ಯಕ್ರಮ, ಪೋಷಕತ್ವ ಯೋಜನೆ, ಉಪಕಾರ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಬಾಲ ನ್ಯಾಯಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಇರುವ ಪ್ರಕರಣಗಳ ಮಾಹಿತಿ, ತರಬೇತಿ ಹಾಗೂ ಅರಿವು ಮೂಡಿಸಲು ಕೈಗೊಂಡ ಕ್ರಮ, ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಸರ್ಚ್ ಸ್ವಯಂ ಸಂಸ್ಥೆ ಅಧ್ಯಕ್ಷ ವೆಂಕಟೇಶ ಮುಖೆ, ದತ್ತು ಪ್ರಕ್ರಿಯೆಯಲ್ಲಿ ಮಗುವಿನ ಜನನ ಪ್ರಮಾಣ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಭೆಗೆ ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ಡಿ, ಜಿ.ಪಂ. ಸಹಾಯಕ ಉಪ ಕಾರ್ಯದರ್ಶಿ ಎಸ್.ಎಂ. ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಸದಸ್ಯರಾದ ರಾಜಕುಮಾರ ಕಾತರಕಿ, ಸಿದ್ದನಗೌಡ ಅರಸಿಕೇರೆ, ವಿಜಯಾ, ಸುವರ್ಣ ನಾಗಠಾಣ, ಗುಡ್ಡದ ಸಿದ್ರಾಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್. ಗುಳೇದ ಸೇರಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net