ಭ್ರಷ್ಟಾಚಾರ ಮುಕ್ತ ಆಡಳಿತ

 ಬಾಗಲಕೋಟೆ ನಗರದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಪ್ರಕಾಶ ತಪಶೆಟ್ಟಿ ಅಧಿಕಾರ ಸ್ವೀಕರಿಸಿದರು. ಶಾಸಕ ಉಮೇಶ ಮೇಟಿ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಸ್.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ರಕ್ಷಿತಾ ಈಟಿ ಇದ್ದರು.
ಬಾಗಲಕೋಟೆ ನಗರದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಪ್ರಕಾಶ ತಪಶೆಟ್ಟಿ ಅಧಿಕಾರ ಸ್ವೀಕರಿಸಿದರು. ಶಾಸಕ ಉಮೇಶ ಮೇಟಿ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಸ್.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ರಕ್ಷಿತಾ ಈಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಭರವಸೆ
  • ಎರಡನೇ ಬಾರಿಗೆ ಅಧಿಕಾರ ಸ್ವೀಕಾರ
  • ಸಂತ್ರಸ್ತರ ನೆಮ್ಮದಿ ಮುಖ್ಯ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾಗಿರುವ ಬಾಗಲಕೋಟೆ ನಗರ ಸಂತ್ರಸ್ತರು ದೊಡ್ಡ ತ್ಯಾಗ ಜೀವಿಗಳು. ಅವರಿಗಾಗಿ ಸ್ಥಾಪನೆಗೊಂಡಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಭ್ರಷ್ಟಾಚಾರ ಮುಕ್ತ, ಯಾರ ಹಸ್ತಕ್ಷೇಪವು ಇಲ್ಲದ ಆಡಳಿತ ನಡೆಸಲಾಗುವುದು. ಸಂತ್ರಸ್ತರ ನೆಮ್ಮದಿ ಮುಖ್ಯ ಎಂದು ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ಇಲ್ಲಿನ ಬಿಟಿಡಿಎ ಕಚೇರಿ ಆವರಣದಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಬಿಟಿಡಿಎ ಯಾರ ಸ್ವಂತ ಆಸ್ತಿಯಲ್ಲ. ಸಂತ್ರಸ್ತರಿಗೆ ಪುನರ್ವಸತಿ -ಮರು ನಿರ್ಮಾಣಕ್ಕಾಗಿ ನಾಲ್ಕು ದಶಕಗಳ ಹಿಂದೆ ಸರ್ಕಾರವೇ ಈ ಬೋರ್ಡ್ ಸ್ಥಾಪನೆ ಮಾಡಿದೆ. ಸಂತ್ರಸ್ತರಿಗೆ ಪಾರದರ್ಶಕ ಆಡಳಿತ ವ್ಯವಸ್ಥೆ ಕಲ್ಪಿಸಲಾಗುವುದು, ಹೊಸ ಸ್ಪರ್ಶ-ರೂಪ ನೀಡಲಾಗುವುದು ಅಂತ ಭರವಸೆ ನೀಡಿದರು.
ಬಾಗಲಕೋಟೆ ನಗರದ ಸಂತ್ರಸ್ತರಿಗಾಗಿ ಇರುವ ಪುನರ್ವಸತಿ ಅಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸಂತ್ರಸ್ತರಿಗೆ ಸ್ಪಂದನೆ ಮಾಡಬೇಕು. ಇ-ಸ್ವತ್ತು ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು. ಮೂಲೆ ನಿವೇಶನ ಹರಾಜು ಹಾಕಲಾಗುವುದು. ಈ ಹಿಂದೆ ಜೆ.ಎಚ್. ಪಟೇಲ್ ಸರ್ಕಾರ ಅವಧಿಯಲ್ಲಿ 1997-98 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷನಾಗಿದ್ದೆ. ಸಹಕಾರಿ ಕ್ಷೇತ್ರದಲ್ಲಿ ಅನುಭವ ಇದೆ. ನಮ್ಮ ಆಡಳಿತ ಶೈಲಿ ಎಲ್ಲರಿಗೂ ಗೊತ್ತಿದೆ. ಯಾರ ಮುಲಾಜಿಗೆ ಒಳಗಾಗುವ ಪ್ರಶ್ನೆ ಇಲ್ಲ. ಬ್ರೋಕರ್‌ಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.
ಬದಲಾವಣೆ ಆಗಬೇಕು ಎನ್ನುವುದು ನಮ್ಮ ಆಶಯವಿದೆ. ಸಂತ್ರಸ್ತರು ಅರ್ಜಿ ಸಲ್ಲಿಸಿದ 5-7 ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ದಾಖಲಾತಿಯಲ್ಲಿ ವ್ಯತ್ಯಾಸ ಇದ್ದರೇ ಕೂಡಲೇ ಪಡೆದು ಸರಿಪಡಿಸಿ ಕಡತ ಮುಂದುವರಿಸಬೇಕು. ಎನ್‌ಒಸಿ, ಕಟ್ಟಡ ಪರವಾನಗಿ, ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು ಸೇರಿ ಸಾಮಾನ್ಯ ಕೆಲಸಗಳಿಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವಂತಿಲ್ಲ. ತಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಬಾಗಲಕೋಟೆ ಮಾರುಕಟ್ಟೆಯು ಮುಳುಗಡೆಯಾದ ಬಳಿಕ ವ್ಯಾಪಾರ-ವಹಿವಾಟು ಕುಸಿದು ಹೋಗಿದೆ. 35 ಸಂಘಟನೆಗಳ ಒಕ್ಕೂಟ ಬುಮಾ 200 ಎಕರೇ ಮಾರುಕಟ್ಟೆಗಾಗಿ ಮೀಸಲಿಟ್ಟು ಹೊಸ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದೆ. ಸರ್ಕಾರದ ಮಟ್ಟದಲ್ಲಿದ್ದು, ಅದಕ್ಕೆ ಬೇಕಾದ ಅಗತ್ಯ ತಯಾರಿ, ಪ್ರಯತ್ನ ಮಾಡಲಾಗುವುದು. ನವನಗರದ ಯೂನಿಟ್-1-2 ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದಿದೆ. ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಗುತ್ತಿಗೆದಾರರು, ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು. ಸಂತ್ರಸ್ತರು ತ್ಯಾಗ ಜೀವಿಗಳು ಎನ್ನುವುದು ಮರೆಯಬಾರದು ಎಂದು ತಿಳಿಸಿದರು.
ಹೊಸ ಶಕ್ತಿ, ಹೊಸ ಭರವಸೆಯೊಂದಿಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಕೆಲಸ ಮಾಡಿ ಬಾಗಲಕೋಟೆ ನಗರದ ಜನರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಮ್ಮ ಆಶಯ. ಛಲವು ಇದೆ. ಸಾರ್ವಜನಿಕರ ಸೇವೆ ಮಾಡುವ ಬಯಕೆ ಇದೆ ಎಂದು ಅಭಯ ನೀಡಿದರು.
ಶಾಸಕ ಉಮೇಶ ಮೇಟಿ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಸ್.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಹೊಳಬಸು ಶೆಟ್ಟರ, ರಕ್ಷಿತಾ ಈಟಿ, ನಾಗರಾಜ ಹದ್ಲಿ, ಭರತ ಈಟಿ, ಸಂಜೀವ ವಾಡಕರ, ಶಿವಕುಮಾರ ನಂದಿಕೋಲಮಠ, ಆನಂದ ಜಿಗಜಿನ್ನಿ, ದ್ಯಾಮಣ್ಣ ಗಾಳಿ, ಮಲ್ಲಿಕಾರ್ಜುನ ಮೇಟಿ ಇದ್ದರು.

ಜಾಗೃತಿಯಿಂದ ಕೆಲಸ ಮಾಡಿ

ಬಿಟಿಡಿಎ ಬೈಲಾ ತಿದ್ದುಪಡಿ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ರದ್ದತಿ ವಿಚಾರ ಕೋರ್ಟ್‌ನಲ್ಲಿ ಇದ್ದು, ತಡೆಯಾಜ್ಞೆ ಇದೆ. ಕಾನೂನು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಲಾಗುವುದು. ಷರತ್ತು ಬದ್ಧ ಕ್ರಯ ಪತ್ರ ಹಂಚಿಕೆಗೆ ಒತ್ತು ನೀಡಲಾಗುವುದು. ಇಂಜಿನಿಯರಿಂಗ್ ವಿಭಾಗದಲ್ಲಿ ಎರಡು ವಿಭಾಗ, 8 ಉಪ ವಿಭಾಗಗಳಿವೆ. ಅಧಿಕಾರಿಗಳು ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net