ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜರುಗಿದ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿದರು. ಭೀಮಶಿ ಮಗದುಮ್, ರಾಜೇಂದ್ರ ಭದ್ರನ್ನವರ, ಸಿದ್ದು ಕೊಣ್ಣೂರ, ಮಲ್ಲಪ್ಪ ಸಿಂಗಾಡಿ, ಯಲ್ಲನಗೌಡ ಪಾಟೀಲ, ದೇವಲ ದೇಸಾಯಿ ಇದ್ದರು.
ರಬಕವಿ/ಬನಹಟ್ಟಿ: ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಯೋಜನೆಗಳನ್ನೇ ಬಿಜೆಪಿಯವರು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಜನಪರ ಯೋಜನೆಗಳನ್ನು ನೀಡುವ ಪಕ್ಷ. ಇದಕ್ಕೆ ಸದ್ಯ ರಾಜ್ಯದಲ್ಲಿನ ಪಂಚ ಗ್ಯಾರಂಟಿಗಳೇ ಸಾಕ್ಷಿ ಎಂದು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಬಾಗಲಕೋಟೆ ಉಪಚುನಾವಣೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ. ಎಚ್.ವೈ. ಮೇಟಿಯವರ ಉತ್ತಮ ಕಾರ್ಯಗಳೇ ಉಮೇಶರಿಗೆ ಆಶೀರ್ವಾದವಾಗಿ 22 ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿದೆ ಎಂದರು.
ರಾಜಕಾರಣ ಹಾಗೂ ಮತಕ್ಕಾಗಿ ಬದುಕುವ ಪಕ್ಷ ಬಿಜೆಪಿ. ಆದರೆ ಕಾಂಗ್ರೆಸ್ ಪಕ್ಷ ಬದುಕನ್ನು ರೂಪಿಸುವ ಪಕ್ಷ. ಬಿಜೆಪಿಯು ಕುಚೋದ್ಯತನದ ಹೇಳಿಕೆಗಳನ್ನು ನಿಲ್ಲಿಸಬೇಕೆಂದು ನಂಜಯ್ಯನಮಠ ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಜಾತಿಯತೆಯಿಂದಲೇ ಬಿಜೆಪಿ ಅಧೋಗತಿಯತ್ತ ಸಾಗಿದೆ. ಕ್ಷೇತ್ರದಲ್ಲಿ ಬೂತ್‌ಮಟ್ಟದ ಕಾರ್ಯಗಳನ್ನು ರೂಪಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕಾರ್ಯಕರ್ತರು ಸನ್ನದ್ಧರಾಗಬೇಕು. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವಲ್ಲಿ ಮತದಾರರು ತುದಿಗಾಲಿನಲ್ಲಿ ನಿಂತು ಹಾತೊರೆಯುತ್ತಿದ್ದಾರೆ. ಶಾಸಕರ ನೀಚ ಕಾರ್ಯಗಳಿಗೆ ಜನ ಬೇಸತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್, ರಾಜೇಂದ್ರ ಭದ್ರನ್ನವರ, ರಾಜು ಮನ್ನಿಕೇರಿ ಲಕ್ಷ್ಮಣ ದೇಸಾರಟ್ಟಿ ಮಾತನಾಡಿದರು.