ಕಾಂಗ್ರೆಸ್ ಹಠಾವೋ ಬಂಜಾರ ಬಚಾವೋ ಆಂದೋಲನ

ಬಾಗಲಕೋಟೆಯಲ್ಲಿ ಮಾಜಿ ಸಂಸದ ಉಮೇಶ ಜಾಧವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಔರಾದ್ ಶಾಸಕ ಪ್ರಭು ಚವಾಣ್, ಮುಖಂಡರಾದ ಹೂವಪ್ಪ ರಾಠೋಡ, ರತ್ನಪ್ಪ ರಾಠೋಡ, ಮಣಿಕಂಠ ರಾಠೋಡ ಮತ್ತಿತರರಿದ್ದರು.
ಬಾಗಲಕೋಟೆಯಲ್ಲಿ ಮಾಜಿ ಸಂಸದ ಉಮೇಶ ಜಾಧವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಔರಾದ್ ಶಾಸಕ ಪ್ರಭು ಚವಾಣ್, ಮುಖಂಡರಾದ ಹೂವಪ್ಪ ರಾಠೋಡ, ರತ್ನಪ್ಪ ರಾಠೋಡ, ಮಣಿಕಂಠ ರಾಠೋಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದ ಮುಖಂಡ ಉಮೇಶ ಜಾಧವ ಹೇಳಿಕೆ
  • ಒಳಮೀಸಲಾತಿ ಅವೈಜ್ಞಾನಿಕ ಎಂದು ಆರೋಪ
ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿ ಒಳಮೀಸಲಾತಿ ಹಂಚಿಕೆ ಮಾಡಿದೆ. ಇದರಿಂದ ಬಂಜಾರ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಸಮಾಜಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಹಠಾವೋ, ಬಂಜಾರ ಬಚಾವೋ ಆಂದೋಲನವನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಕಲಬುರಗಿ ಮಾಜಿ ಸಂಸದ, ಬಂಜಾರ ಸಮಾಜದ ಮುಖಂಡ ಉಮೇಶ ಜಾಧವ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆಗೆ ಸಮಿತಿ ರಚಿಸಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವೈಜ್ಞಾನಿಕವಾಗಿ ನಿಗದಿ ಪಡಿಸಿತ್ತು. ಅದರಲ್ಲಿ ಎಸ್ಸಿ ಎಡ ಸಮುದಾಯಕ್ಕೆ ಶೇ.6, ಎಸ್ಸಿ ಬಲ ಸಮುದಾಯಕ್ಕೆ ಶೇ.5.5, ಕೊರಮ, ಕೊರಚ, ಲಂಬಾಣಿ, ಭೋವಿಗಳಿಗೆ ಶೇ. 4.5 ಹಾಗೂ ಅಲೆಮಾರಿಗಳಿಗೆ ಶೇ.1 ಮೀಸಲಾತಿ ಹಂಚಿಕೆ ಮಾಡಿತ್ತು.

ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ನ್ಯಾ. ನಾಗಮೋಹನದಾಸ ಆಯೋಗ ರಚಿಸಿ ಕನಿಷ್ಠ ಅವರ ಶಿಫಾರಸುಗಳನ್ನು ಪರಿಗಣಿಸದೇ, ಬಿಜೆಪಿ ಸರ್ಕಾರದಲ್ಲಿ ಕೊಲಂಬೋ ಸಮುದಾಯಗಳ ಶೇ. 4.5 ಮೀಸಲಾತಿಯಲ್ಲಿ ಒಟ್ಟು 63 ಸಮುದಾಯಗಳಿಗೆ ಹಂಚಿಕೆ ಮಾಡಿರುವುದು ತೀವ್ರ ಅನ್ಯಾಯವಾಗಿದೆ ಎಂದು ಹೇಳಿದರು.

ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆಯಿಂದಾಗಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ. ನಾಗಮೋಹನದಾಸ್ ವರದಿಯ ಅಂಕಿ-ಅಂಶಗಳನ್ನು ಒದಗಸಬೇಕು. ಯಾವ ಸಮುದಾಯದವರು ಎಷ್ಟು ಜನಸಂಖ್ಯೆ ಹೊಂದಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಅಥವಾ ಕೇಂದ್ರ ಸರ್ಕಾರದ ಜನಗಣತಿ ಪ್ರಕಟವಾಗುವವರೆಗೆ ತಡೆದು ನಂತರದಲ್ಲಿ ಒಳಮೀಸಲಾತಿ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಂಜಾರ ಸಮುದಾಯಕ್ಕೆ ಕನಿಷ್ಠ ಒಂದು ಸಚಿವ ಸ್ಥಾನವನ್ನೂ ನೀಡಿಲ್ಲ. ತೆಲಂಗಾಣದಲ್ಲೂ ಸಹ ನಮ್ಮ ಸಮಾಜವನ್ನು ವಂಚಿಸಲಾಗಿದೆ ಎಂದು ಕಿಡಿಕಾರಿದರು.

ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಿರಂತರವಾಗಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತ ಬಂದಿದೆ. ಈಗ ನಾವೆ ಎಚ್ಚೆತ್ತು ಹೋರಾಟ ಮಾಡಬೇಕಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಯಲ್ಲಿ ಜನಾಂದೋಲನ ನಡೆಸಲಾಗುತ್ತದೆ. ರಸ್ತಾ ರೋಖೋ, ರೈಲು ರೋಖೋಗಳನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಚಿತ್ತಾಪುರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ, ದಿಕ್ಸೂಚಿ ಬಂಜಾರದ ರಾಜ್ಯ ಸಂಯೋಜಕ ಎಸ್.ಪಿ. ಲಿಂಬ್ಯನಾಯಕ್, ಬಂಜಾರ ಸಮುದಾಯದ ಬಾಗಲಕೋಟೆ ಜಿಲ್ಲಾಧ್ಯಕ್ಷ ಹೂವಪ್ಪ ರಾಠೋಡ, ಮುಖಂಡ ರತ್ನಪ್ಪ ರಾಠೋಡ, ನಿಂಗಪ್ಪ ಚವಾಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net