ದೇವಸ್ಥಾನವು ಧಾರ್ಮಿಕ ಪರಂಪರೆಯೊಂದಿಗೆ ಐತಿಹಾಸಿಕ ಮಹತ್ವವನ್ನೂ ಹೊಂದಿದೆ.
ಲೋಕಾಪುರ:
ಐತಿಹಾಸಿಕ ಹಾಗೂ ಆರಾಧ್ಯ ದೈವವಾಗಿರುವ ಭಕ್ತರ ಕಾಮಧೇನು ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಾರ್ವಜನಿಕರು ಮತ್ತು ಭಕ್ತರು ಸಾಮೂಹಿಕವಾಗಿ ಕೈಜೋಡಿಸಬೇಕು ಎಂದು ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನವು ಧಾರ್ಮಿಕ ಪರಂಪರೆಯೊಂದಿಗೆ ಐತಿಹಾಸಿಕ ಮಹತ್ವವನ್ನೂ ಹೊಂದಿದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ರೀತಿಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.
ಹಿರಿಯರಾದ ಎಸ್.ಎನ್. ಹಿರೇಮಠ ಮಾತನಾಡಿ, ದೇವಸ್ಥಾನದ ಅಭಿವದ್ಧಿಯೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಬೇಕು. ವಿವಿಧೆಡೆ ಕೈಗೊಂಡಿರುವ ದೇವಸ್ಥಾನಗಳ ಜೀರ್ಣೋದ್ಧಾರ ಮಾದರಿಗಳ ಕುರಿತು ಮಾಹಿತಿ ಪಡೆದು, ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಯೋಜನೆ ರೂಪಿಸುವುದು ಸೂಕ್ತ ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ವಾಯುಪುತ್ರ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಲೋಕಣ್ಣ ಕತ್ತಿ, ಯಲ್ಲಪ್ಪ ಹಂಚಾಟೆ, ಯಮನಪ್ಪ ಹೊರಟ್ಟಿ, ಗುರುರಾಜ ಉದಪುಡಿ, ಕಿರಣಕುಮಾರ ದೇಸಾಯಿ, ರವಿ ಬೋಳಿಶೆಟ್ಟಿ, ಬಾಬಾಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ ಸೇರಿ ವಿವಿಧ ಗ್ರಾಮಗಳ ಹಿರಿಯರು ಹಾಗೂ ಭಕ್ತರು ಭಾಗವಹಿಸಿ ಜೀರ್ಣೋದ್ಧಾರ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.