ಇಳಕಲ್ಲ ನಗರದ ಲಕ್ಷ್ಮೀಗೌಡರ ಪೇಟೆಯ ನಿವಾಸಿಗಳು ಕುಡಿಯುವ ನೀರಿಗಾಗಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಸವರಾಜ ಗೋಟೂರ, ಪಂಪಣ್ಣ, ಶಂಕರ ಚಿಲ್ಲಾಳ, ಶಿವಣ್ಣ ವೀರಾಪೂರ ಇತರರಿದ್ದರು.
ಮನೆಯಲ್ಲಿ ಕುಡಿಯಲು ಹಾಗೂ ಅಡುಗೆಗೆ ನೀರಿಲ್ಲದೆ ದಿನನಿತ್ಯ ಪರದಾಡುತ್ತಿರುವುದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು
ಇಳಕಲ್ಲ: ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ವಾರ್ಡ್ ನಂ. 2 ಮತ್ತು 3ರ ಲಕ್ಷ್ಮೀಗೌಡರ ಪೇಟೆ ನಿವಾಸಿಗಳು ಮಂಗಳವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮನೆಯಲ್ಲಿ ಕುಡಿಯಲು ಹಾಗೂ ಅಡುಗೆಗೆ ನೀರಿಲ್ಲದೆ ದಿನನಿತ್ಯ ಪರದಾಡುತ್ತಿರುವುದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಬೇರೆ ವಾರ್ಡ್‌ಗಳಿಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ನಿವಾಸಿಗಳು ದೂರಿದರು.
ನಗರಸಭೆ ಅಧಿಕಾರಿಗಳು ಮತ್ತು 24x7 ನೀರು ಸರಬರಾಜು ಸಿಬ್ಬಂದಿ ನಿರ್ಲಕ್ಷೃ ವಹಿಸುತ್ತಿದ್ದು, ನೀರು ಪೂರೈಕೆ ಇಲ್ಲದೇ ಇದ್ದರೂ ನಿಯಮಿತವಾಗಿ ಬಿಲ್ ವಸೂಲಿ ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು. ಪೈಪ್‌ಲೈನ್ ದೋಷದಿಂದ ವಾರ್ಡ್‌ಗೆ ನೀರು ತಲುಪುತ್ತಿಲ್ಲವೆಂದು ಅವರು ತಿಳಿಸಿದರು.
ಬಿಜೆಪಿ ಮುಖಂಡ ವೆಂಕಟೇಶ ಪೋತಾ ಮಾತನಾಡಿ, ಜ್ಯೂನಿಯರ್ ಕಾಲೇಜ್ ಸಮೀಪದ ನೀರಿನ ಟ್ಯಾಂಕ್ ಕಾಮಗಾರಿ ಸ್ಥಗಿತಗೊಂಡಿರುವುದೇ ಸಮಸ್ಯೆಗೆ ಕಾರಣವಾಗಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಸಮಸ್ಯೆ ಪರಿಹರಿಸದಿದ್ದರೆ ನಗರ ಬಂದ್ ಮಾಡಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಗರಸಭೆ ಅಧಿಕಾರಿ ನಾರಾಯಣಿ ಮನವಿ ಸ್ವೀಕರಿಸಿ, ಎರಡು ದಿನಗಳಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಬಸವರಾಜ ಗೋಟೂರ, ಪಂಪಣ್ಣ, ಶಂಕರ ಚಿಲ್ಲಾಳ, ಶಿವಣ್ಣ ವೀರಾಪೂರ, ಸುರೇಶ್ ಮೇದಿಕೇರಿ, ಲಕ್ಷ್ಮೀಬಾಯಿ ಸೇರಿ ಅನೇಕರು ಭಾಗವಹಿಸಿದ್ದರು.