ಮುಧೋಳದ ಸಿಪಿಐ ಕಚೇರಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಸೈಯ್ಯದ್ ರೋಷನ್ ಜಮೀರ್ ಮಾತನಾಡಿದರು. ಸಿಪಿಐ ಎಂ. ನಾಗರಡ್ಡಿ, ಪಿಎಸ್‌ಐ ಅಜಿತಕುಮಾರ ಹೊಸಮನಿ ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮುಧೋಳ: ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದೊಂದಿಗೆ ಆಚರಿಸುವ ಮೂಲಕ ಮುಧೋಳ ನಗರದ ಕೋಮು ಸೌಹಾರ್ದತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಜಮಖಂಡಿ ಡಿವೈಎಸ್ಪಿ ಸೈಯ್ಯದ್ ರೋಷನ್ ಜಮೀರ್ ಹೇಳಿದರು.
ನಗರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಯುವಕರು ಪೊಲೀಸರೊಂದಿಗೆ ಸಹಕರಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಮನವಿ ಮಾಡಿದರು.
ಸಿಪಿಐ ಎಂ. ನಾಗರಡ್ಡಿ ಮಾತನಾಡಿ, ಮುಧೋಳ ನಗರವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಎಲ್ಲ ಸಮುದಾಯಗಳ ಹಿರಿಯರು ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯುವಕರಲ್ಲಿ ಭಾವನಾತ್ಮಕ ವಿಚಾರಗಳು ಮೂಡಿದಾಗ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಿ, ಶಾಂತಿಯ ಸಂದೇಶದೊAದಿಗೆ ಹಬ್ಬದ ಆಚರಣೆಗೆ ಸಹಕರಿಸಬೇಕು ಎಂದರು.
ಪಿಎಸ್‌ಐ ಅಜಿತಕುಮಾರ ಹೊಸಮನಿ, ಮನೋಹರ್ ಕುರಿ, ಮುಸ್ಲಿಂ ಸಮಾಜದ ಮುಖಂಡರಾದ ಖಾಜಾಮೀನ್ ಬಾಗವಾನ್, ಫಜಲ್ ಮೋಮಿನ್, ಶಬ್ಬೀರ್ ಚಿತ್ತಿ, ರಿಯಾಜ್ ಬಾಗವಾನ್, ಇಸ್ಮಾಯಿಲ್ ವಾಲೀಕಾರ ಸೇರಿ ವಿವಿಧ ಬಡಾವಣೆಗಳ ಯುವ ಮುಖಂಡರು ಭಾಗವಹಿಸಿದ್ದರು.
ಈದ್ ಮಿಲಾದ್ ಮೆರವಣಿಗೆಯ ಮಾರ್ಗ, ಸಮಯ ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು.