ಮತ ಎಣಿಕೆ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ

 ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಮೇ 4ರಂದು ಬಾಗಲಕೋಟೆ ಉಪ ಚುನಾವಣೆಯ ಮತ ಎಣಿಕೆಗೆ ನೇಮಕಗೊಂಡ ಸಿಬ್ಬಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಮಾಸ್ಟರ್ ಟ್ರೈನರ್ ಶಶಿಶೇಖರ ರೆಡ್ಡಿ ಮತ್ತಿತರರು ಇದ್ದರು.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಮೇ 4ರಂದು ಬಾಗಲಕೋಟೆ ಉಪ ಚುನಾವಣೆಯ ಮತ ಎಣಿಕೆಗೆ ನೇಮಕಗೊಂಡ ಸಿಬ್ಬಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಮಾಸ್ಟರ್ ಟ್ರೈನರ್ ಶಶಿಶೇಖರ ರೆಡ್ಡಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆ ಉಪ ಚುನಾವಣೆ
  • ಮತ ಎಣಿಕೆ ಸಿಬ್ಬಂದಿಗೆ ತರಬೇತಿ
  • ಸಿಬ್ಬಂದಿಗೆ ಡಿಸಿ ಸಂಗಪ್ಪ ಸಲಹೆ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಜಿಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತ ಎಣಿಕೆಗೆ ನೇಮಕಗೊಂಡ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮೇ 4ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಈಗಾಗಲೇ ಮತ ಎಣಿಕೆ ಕೇಂದ್ರ ಸಂಪೂರ್ಣ ಸಜ್ಜಾಗಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕು. ಮತ ಎಣಿಕೆಗೆ ಒಟ್ಟು 14 ಟೇಬಲ್‌ಗಳನ್ನು ಇರಿಸಲಾಗಿದ್ದು, ಪ್ರತಿ ಟೇಬಲ್‌ಗೆ ತಲಾ ಒಬ್ಬರಂತೆ ಮತ ಎಣಿಕಾ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟು 63 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಅಂಚೆ ಮತಪತ್ರ ಎಣಿಕೆಗೆ ಪ್ರತ್ಯೇಕ ಕೊಠಡಿ ಇದ್ದು, 2 ಟೇಬಲ್ ಇರಿಸಲಾಗಿದೆ. ಸ್ಕಾೃನಿಂಗ್ ಮಾಡಲು ಟೇಬಲ್ ಸಹ ಇರಿಸಲಾಗಿದೆ ಎಂದು ತಿಳಿಸಿದರು.
ಮಾಸ್ಟರ ಟ್ರೈನರ್ ಶಶಿಶೇಖರ ರೆಡ್ಡಿ ಅವರು, ಪ್ರಾತ್ಯಕ್ಷಿಕೆಯ ಮೂಲಕ ಮತ ಎಣಿಕೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು. ಮತ ಎಣಿಕೆ ಪ್ರಕ್ರಿಯೆಯ ಎಲ್ಲ ಹಂತಗಳ ಕುರಿತು ವಿವರವಾದ ಮಾಹಿತಿ ನೀಡಿದರು. ವಿವಿಎಂ ಯಂತ್ರಗಳ ಬಳಕೆ, ವಿವಿಪ್ಯಾಟ್ ಸ್ಲಿಪ್‌ಗಳ ಪರಿಶೀಲನೆ, ಮತ ಎಣಿಕೆ ವೇಳೆ ಅನುಸರಿಸಬೇಕಾದ ನಿಯಮಗಳು ಹಾಗೂ ಎಚ್ಚರಿಕೆ ಕ್ರಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರರಾದ ವಾಸುದೇವ ಸ್ವಾಮಿ, ಡಾ.ಪ್ರದೀಪಕುಮಾರ ಸೇರಿದಂತೆ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ಆಬ್ಸರವರ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net