ಶಿಫಾರಸು ಜಾಗೆಯಲ್ಲೇ ಪ್ರಜಾಸೌಧ ನಿರ್ಮಿಸಿ

ರಬಕವಿ ಪ್ರವಾಸ ಮಂದಿರದಲ್ಲಿ ಸಮಸ್ತ ರಬಕವಿ ನಾಗರಿಕರು ಹಮ್ಮಿಕೊಂಡಿದ್ದ ಸಭೆಯಲ್ಲಿ ರಬಕವಿ- ಬನಹಟ್ಟಿ ತಾಲೂಕು ಪ್ರಜಾಸೌಧ ಕಟ್ಟಡವನ್ನು ಕಂದಾಯ ಇಲಾಖೆ ಅಧಿಕಾರಿಗಳು ಗುರುತಿಸಿದ ಜಾಗೆಯಲ್ಲಿ ನಿರ್ಮಿಸಲು ಸಂಜಯ ಜೋತಾವರ ಆಗ್ರಹಿಸಿದರು. ರಾಮಣ್ಣ ಹುಲಕುಂದ, ಸಂಗಪ್ಪ ಮಡಿವಾಲ, ಹೊನ್ನಪ್ಪ ಬಿರಡಿ ಇತರರಿದ್ದರು.
ರಬಕವಿ ಪ್ರವಾಸ ಮಂದಿರದಲ್ಲಿ ಸಮಸ್ತ ರಬಕವಿ ನಾಗರಿಕರು ಹಮ್ಮಿಕೊಂಡಿದ್ದ ಸಭೆಯಲ್ಲಿ ರಬಕವಿ- ಬನಹಟ್ಟಿ ತಾಲೂಕು ಪ್ರಜಾಸೌಧ ಕಟ್ಟಡವನ್ನು ಕಂದಾಯ ಇಲಾಖೆ ಅಧಿಕಾರಿಗಳು ಗುರುತಿಸಿದ ಜಾಗೆಯಲ್ಲಿ ನಿರ್ಮಿಸಲು ಸಂಜಯ ಜೋತಾವರ ಆಗ್ರಹಿಸಿದರು. ರಾಮಣ್ಣ ಹುಲಕುಂದ, ಸಂಗಪ್ಪ ಮಡಿವಾಲ, ಹೊನ್ನಪ್ಪ ಬಿರಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಸಂಜೀವ ಜೋತಾವರ ಆಗ್ರಹ
  • ಸಮಸ್ತ ನಾಗರಿಕರ ಸಭೆ ಆಯೋಜನೆ
ರಬಕವಿ/ಬನಹಟ್ಟಿ: ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡವನ್ನು ತಾಲೂಕು ಕೇಂದ್ರ ಭಾಗದಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳು ಗುರುತಿಸಿ ಶಿಫಾರಸು ಮಾಡಿದ ಜಾಗೆಯಲ್ಲೇ ನಿರ್ಮಿಸಬೇಕು ಎಂದು ಉದ್ಯಮಿ ಸಂಜೀವ ಜೋತಾವರ ಆಗ್ರಹಿಸಿದರು.
ರಬಕವಿ ಪ್ರವಾಸ ಮಂದಿರದಲ್ಲಿ ಸಮಸ್ತ ರಬಕವಿ ನಾಗರಿಕರು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲಾಧಿಕಾರಿಗಳು, ಜಮಖಂಡಿ ಉಪ ವಿಭಾಗಾಧಿಕಾರಿಗಳು ಹಾಗೂ ರಬಕವಿ-ಬನಹಟ್ಟಿ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ತಾಲೂಕಿನ ಕೇಂದ್ರ ಸ್ಥಾನ ಹಾಗೂ ಎಲ್ಲರಿಗೂ ಅನುಕೂಲವಾಗುವ ರಬಕವಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಅವರ ಒಡೆತನದ ಸಿಟಿಎಸ್ ಸಂಖ್ಯೆ 80ರಲ್ಲಿನ ಒಟ್ಟು 9.20 ಎಕರೆ ಪ್ರದೇಶದ ಖಾಲಿ ಇರುವ 3.18 ಎಕರೆ ಪ್ರದೇಶದ ಜಾಗೆಯಲ್ಲಿ ಪ್ರಜಾಸೌಧ ನಿರ್ಮಿಸಲು ಯೋಗ್ಯವೆಂದುಶಿಫಾರಸು ಮಾಡಲಾಗಿತ್ತು. ಈ ಜಾಗೆಯನ್ನು ತಾಲೂಕು ಪ್ರಜಾಸೌಧ ನಿರ್ಮಿಸಲು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಕಡತವನ್ನು ವ್ಯವಸ್ಥಾಪಕರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು ಅವರಿಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳು ಸಲ್ಲಿಸಿದ್ದಾರೆ. ರಬಕವಿ ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈ ಜಾಗೆಯಲ್ಲಿ ಪ್ರಜಾಸೌಧ ನಿರ್ಮಾಣಗೊಂಡರೆ ತಾಲೂಕಿನ ಎಲ್ಲ ಭಾಗಗಳ ಜನತೆಗೆ, ಮಹಿಳೆಯರಿಗೆ, ವೃದ್ಧರಿಗೆ ಹಾಗೂ ವಿಕಲಚೇತನರಿಗೆ ಯಾವುದೇ ಅನಗತ್ಯ ಶ್ರಮವಿಲ್ಲದ ಹಾಗೂ ಹೆಚ್ಚಿನ ಆರ್ಥಿಕ ಹೊರೆಯಾಗದ ಕಾರಣ ಅನುಕೂಲವಾಗುತ್ತದೆ ಎಂದು ಜೋತಾವರ ತಿಳಿಸಿದರು.
ಹಿರಿಯ ಮುಖಂಡ ರಾಮಣ್ಣಾ ಹುಲಕುಂದ ಮಾತನಾಡಿ, ಪ್ರಜಾಸೌಧ ಕಂದಾಯ ಇಲಾಖೆಗೆ ನೀರಾವರಿ ನಿಗಮದಿಂದ ಹಸ್ತಾಂತರಿಸಲು ಯಾವುದೇ ತೊಂದರೆಯಾಗದು. ಸದ್ಯ ಕಾರ್ಯಭಾರ ಕೊರತೆ ಕಾರಣ ನಿಗಮದ ಸಿಬ್ಬಂದಿ ಜಮಖಂಡಿಗೆ ಸ್ಥಳಾಂತರಿಸಲಾಗಿದ್ದು, ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗೆ ನೀಡಲು ನಿಗಮಕ್ಕೆ ಯಾವುದೇ ಅಡಚಣೆಯಾಗದು. ದಿ. ಸಿದ್ದು ನ್ಯಾಮಗೌಡರಿದ್ದಾಗ ಜಮಖಂಡಿ ಸಾರಿಗೆ ನಿಗಮದ ಡಿಪೋಗೆ ಎಂದು ನೀರಾವರಿ ನಿಗಮದ ಒಡೆತನದ ಜಾಗೆಯನ್ನು ವರ್ಗಾಯಿಸಿದ ಬಳಿಕ ಈಗ ಅದೇ ಜಾಗೆಯಲ್ಲಿ ಬಸ್ ಡಿಪೋ ಘಟಕ ಕಾರ್ಯ ನಿರ್ವಹಿಸುತ್ತಿದೆ. ನಿಗಮ ಮತ್ತು ನಿಗಮಗಳ ನಡುವೆ ವರ್ಗಾವಣೆ ಸಾಧ್ಯವಾದರೆ ಕಂದಾಯ ಇಲಾಖೆಗೆ ಜಾಗೆ ಹಸ್ತಾಂತರಿಸಲು ಯಾವುದೇ ಅಡಚಣೆಯಾಗದು. ರಾಜ್ಯ ಸರ್ಕಾರ ತಾಲೂಕಿನ ಸಮಸ್ತ ಜನತೆಯ ಹಿತ ಲಕ್ಷಿಸಿ ಕೇಂದ್ರ ಸ್ಥಳ ಹಾಗೂ ಪಕ್ಕದಲ್ಲೇ ಸಾರಿಗೆ ಸಂಪರ್ಕದ ಬಸ್ ನಿಲ್ದಾಣವಿರುವ ಕಾರಣ ತಕ್ಷಣ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದರು.
ಸಂಗಪ್ಪ ಮಡಿವಾಳ, ಹೊನ್ನಪ್ಪ ಬಿರಡಿ, ಬುದ್ದಪ್ಪ ಕುಂದಗೋಳ, ಮಲ್ಲಿಕಾರ್ಜುನ ವಂದಾಲ, ಪುಲಕೇಶಿ ಅಕ್ಕೆನ್ನವರ, ಸುನೀಲ ಬನಹಟ್ಟಿ, ಮಹಾದೇವ ದುಪದಾಳ, ಮಹ್ಮದ ಮಕಾನದಾರ ಹಾಗೂ ನಗರದ ಹಿರಿಯರು ಪಕ್ಷಾತೀತ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net