ಇಳಕಲ್ಲ: ಥಲಸ್ಸಿಮೀಯಾ ಪೀಡಿತ ಮಕ್ಕಳಿಗೆ ನಿರಂತರವಾಗಿ ರಕ್ತದ ಅಗತ್ಯವಿದ್ದು, ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವುದು ಅತ್ಯಂತ ಮಾನವೀಯ ಮತ್ತು ಶ್ರೇಷ್ಠ ಕಾರ್ಯವಾಗಿದೆ ಎಂದು ಚಿತ್ರನಟಿ ಮನೀಶಾ ಕಂದಕೂರ ಹೇಳಿದರು.
ನಗರದ ಮಾಹೇಶ್ವರಿ ಆಸ್ಪತ್ರೆಯಲ್ಲಿ ಭಾನುವಾರ ರಾಮಾನುಜಾಚಾರ್ಯ ಫೌಂಡೇಷನ್, ಮಾಹೇಶ್ವರಿ ಆಸ್ಪತ್ರೆ, ಬಾಗಲಕೋಟೆಯ ಬನಶಂಕರಿ ಬ್ಲಡ್ ಬ್ಯಾಂಕ್ ಹಾಗೂ ವಿಜಯಮಹಾಂತ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 9ನೇ ಬಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಥಲಸ್ಸಿಮೀಯಾ ಪೀಡಿತ ಮಕ್ಕಳ ಜೀವ ಉಳಿಸುವಲ್ಲಿ ಇಂತಹ ಶಿಬಿರಗಳ ಪಾತ್ರ ಮಹತ್ವದ್ದಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆಗಳ ಸೇವೆ ಶ್ಲಾಘನೀಯ ಎಂದು ಹೇಳಿದರು. ಇಂತಹ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಅವರು ತಿಳಿಸಿದರು.
ಕೆ.ಎ.ಎಸ್.ಎಚ್. ಫೌಂಡೇಷನ್ ಅಧ್ಯಕ್ಷೆ ಕಾಜಲ್ ಸಚ್‌ದೇವ, ಕೆ.ಐ.ಎಮ್.ಎಸ್ ಆಸ್ಪತ್ರೆಯ ಡಾ. ರವಿ ಜೋಶಿ, ಉದ್ಯಮಿ ಸುಭಾಸಚಂದ್ರಜೀ ಕಠಾರಿಯಾ ಸೇರಿ ಹಲವರು ಭಾಗವಹಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ರಾಮಾನುಜಾಚಾರ್ಯ ಫೌಂಡೇಷನ್ ಅಧ್ಯಕ್ಷ ಅಭಿಷೇಕ ದರಕ ಅಧ್ಯಕ್ಷತೆ ವಹಿಸಿದ್ದರು. ಡಾ. ಪನವಕುಮಾರ ದರಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನೇಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.