ರಕ್ತ ನಿಧಿ ಕೇಂದ್ರ ನಿರ್ಜೀವ

 ರಬಕವಿ/ಬನಹಟ್ಟಿ ಸಮುದಾಯ ಆಸ್ಪತ್ರೆಯ ನೋಟ.
ರಬಕವಿ/ಬನಹಟ್ಟಿ ಸಮುದಾಯ ಆಸ್ಪತ್ರೆಯ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಜೀವ ಉಳಿಸಿಕೊಳ್ಳಲು ರೋಗಿಗಳ ಸಂಬಂಧಿಕರ ಪರದಾಟ
  • ಸರ್ಕಾರಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗುತ್ತಿಲ್ಲ
  • ಕಳೆದೊಂದು ವರ್ಷದಿಂದ ರಕ್ತ ಸಂಗ್ರಹಣೆ ನಡೆಯುತ್ತಿಲ್ಲ
ರಬಕವಿ/ಬನಹಟ್ಟಿ: ಅವಳಿ ನಗರಗಳ ಸಮುದಾಯ ಆಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರ ಕಳೆದೊಂದು ವರ್ಷದಿಂದ ಸಿಬ್ಬಂದಿ ವರ್ಗಾವಣೆ ನಂತರ ಬೇರೇ ಯಾರೂ ಇಲ್ಲಿಗೆ ಆಗಮಿಸದ ಹಿನ್ನೆಲೆ ಸಮಸ್ಯೆಗೆ ಸಿಲುಕಿ, ಕಾರ್ಯ ನಿರ್ವಹಿಸದೆ ಸಂಪೂರ್ಣ ಸ್ಥಗಿತಗೊಂಡು ರೋಗಿಗಳು ಪರದಾಡುವಂತಾಗಿದೆ.
ಅಗತ್ಯ ಸೌಲಭ್ಯ, ನಿರ್ವಹಣೆ ಕೊರತೆ ಕಾರಣಕ್ಕೆ ಕಳೆದೊಂದು ವರ್ಷದಿಂದ ರಕ್ತ ಸಂಗ್ರಹಣೆ ನಡೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತ ದೊರಕದೆ ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣ ಅನೇಕ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸಮುದಾಯ ಆಸ್ಪತ್ರೆ ರಕ್ತ ನಿಧಿ ಕೇಂದ್ರದಲ್ಲಿ 30 ರಿಂದ 40 ಯುನಿಟ್ ರಕ್ತ ಸಂಗ್ರಹ ಸಾಮರ್ಥ್ಯವಿದೆ. ಪ್ರತಿ ತಿಂಗಳು ನಿರ್ವಹಣೆಗೆ ಆಗಾಗ್ಗೆ ಜಿಲ್ಲಾಸ್ಪತ್ರೆಯಿಂದ ನಿರ್ವಹಣೆಯಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಎಲ್ಲವೂ ಸ್ಥಗಿತಗೊಂಡಿದೆ.
ಗರ್ಭಿಣಿಯರು, ರಕ್ತಹೀನತೆ, ಹಿಮೊಫಿಲಿಯಾ ಸೇರಿ ತುರ್ತು ರಕ್ತದ ಅವಶ್ಯಕತೆವಿರುವ ರೋಗಿಗಳು ಖಾಸಗಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ದುಪ್ಪಟ್ಟು ಹಣ ನೀಡಿ ರಕ್ತ ಪಡೆದು ಜೀವ ಉಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ರಕ್ತ ಬೇಕಾಗುತ್ತದೆ. ಅಲ್ಲದೆ ಪ್ರಸವ ವೇಳೆ ಹೆಚ್ಚಿನ ರಕ್ತಸ್ರಾವವಾಗಿದ್ದರೆ ರಕ್ತ ನೀಡುವ ಅವಶ್ಯಕತೆಯಿರುತ್ತದೆ. ಆದರೆ ರಕ್ತದ ಲಭ್ಯತೆಯಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
ಆಸ್ಪತ್ರೆಯಲ್ಲಿ ರಕ್ತ ದೊರೆಯದ ಕಾರಣ ಹಲವು ಸಮಸ್ಯೆಗಳು ಉಂಟಾಗಿವೆ. ರಕ್ತದ ಕೊರತೆಯ ನೆಪವೊಡ್ಡಿ ಸರ್ಕಾರಿ ವೈದ್ಯರು ಶಸ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಬದಲಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಪ್ರಸಂಗ ಎದುರಾಗುತ್ತಿದೆ. ಬಡ ನೇಕಾರರಿಂದಲೇ ಕೂಡಿರುವ ಅವಳಿ ಪಟ್ಟಣಗಳಲ್ಲಿ ಖಾಸಗಿ ಆಸ್ಪತ್ರೆ ಗಗನಕುಸುಮವಾಗಿದೆ ಎಂದು ರೋಗಿಗಳ ಸಂಬಂಧಿಕರು ಬೇಸರ ಹೊರಹಾಕುತ್ತಿದ್ದಾರೆ.
ಇವೆಲ್ಲದಕ್ಕೂ ತಾಲೂಕು ವೈದ್ಯಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ರಕ್ತನಿಧಿ ಕೇಂದ್ರ ನಿರ್ವಹಣೆಗೆ ಮುತುವರ್ಜಿ ವಹಿಸಬೇಕಿದೆ.
"

ಸಾವು ಬದುಕಿನ ನಡುವೆ ಹೋರಾಟ ನಡೆಸುವ ವೇಳೆ ತುರ್ತಾಗಿ ರೋಗಿಗಳಿಗೆ ರಕ್ತ ದೊರೆತು ಅವರ ಜೀವ ಉಳಿಯಲೆಂಬ ಕಾರಣಕ್ಕಾಗಿಯೇ ಇಲ್ಲೊಂದು ರಕ್ತನಿಧಿ ಕೇಂದ್ರ ಸ್ಥಾಪಿಸಿದ್ದಾರೆ. ಆದರೆ ಉದ್ದೇಶ ಮಾತ್ರ ಈಡೇರುತ್ತಿಲ್ಲ. ಇಲ್ಲಿನ ಕೇಂದ್ರದಲ್ಲಿ ರಕ್ತ ಸಿಗದ ಕಾರಣ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
- ಬಾಳೇಶ ನೀರಂಕಲಗಿ. ಯರಗಟ್ಟಿ ಗ್ರಾಮದ ರೈತರು.

"

ಇಲ್ಲಿನ ರಕ್ತ ನಿಧಿ ಕೇಂದ್ರದಲ್ಲಿನ ತೊಂದರೆಯನ್ನು ತಕ್ಷಣದಿಂದ ವಿಚಾರಿಸಿ ಕೂಡಲೇ ಅಲ್ಲಿರುವ ತೊಂದರೆಯನ್ನು ಸರಿಪಡಿಸುತ್ತೇವೆ.
- ಸಿದ್ದು ಸವದಿ, ಶಾಸಕರು ತೇರದಾಳ ಮತಕ್ಷೇತ್ರ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net