ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಬಿಜೆಪಿ ಕಾರ್ಯಕರ್ತರು ನಡೆಸಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದರು. ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮತ್ತಿತರರು ಇದ್ದರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಬಿಜೆಪಿ ಕಾರ್ಯಕರ್ತರು ನಡೆಸಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದರು. ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತದಾರ ಪಟ್ಟಿಯಲ್ಲಿ ಅಕ್ರಮದ ಆರೋಪ
  • ಮುರಡಿ ಗ್ರಾಮದಲ್ಲಿ ಕಂಡು ಬಂದ ಪ್ರಕರಣ
  • ಅಪ್ರಾಪ್ತರು-ಅನ್ಯ ಜಿಲ್ಲೆಯವರ ಹೆಸರು ಸೇರ್ಪಡೆ
ಬಾಗಲಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಆಡಳಿತ ಕಾಂಗ್ರೆಸ್ ಪಕ್ಷದ ಮುಖಂಡರು ಹುನಗುಂದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಹುನಗುಂದ ಹಾಗೂ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಹುನಗುಂದ ಕ್ಷೇತ್ರದ ಮುರಡಿ ಗ್ರಾಮದಲ್ಲಿ ಹೊರ ಜಿಲ್ಲೆಗಳ ಮತದಾರರನ್ನು ಅಕ್ರಮವಾಗಿ ಸೇರಿಸಲಾಗುತ್ತಿದೆ. ಜೊತೆಗೆ ಅಪ್ರಾಪ್ತರ ಹೆಸರು ಸಹ ಸೇರಿಸಿದ್ದಾರೆ. ಜೊತೆಗೆ ಒಂದೇ ವಾರ್ಡ್‌ನಲ್ಲಿ ಒಬ್ಬ ಮತದಾರರ ಹೆಸರು ಸ್ವಲ್ಪ ಹೆಚ್ಚು ಕಡಿಮೆ ಮಾಡಿ ಮೂರು ಕಡೆಗೆ ಸೇರ್ಪಡೆಗೊಳಿಸಿದ್ದಾರೆ. ಇದನ್ನು ಕಾಂಗ್ರೆಸ್ ಮುಖಂಡರು ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮಾಡಿಸುತ್ತಿದ್ದಾರೆ. ಇದರಲ್ಲಿ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ದೂರಿದರು.
ನಗರ ಪ್ರದೇಶದಲ್ಲಿ ಸಹ ನಗರಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಒಂದು ವಾರ್ಡ್‌ನ 50 ಕ್ಕೂ ಹೆಚ್ಚು ಮತದಾರರನ್ನು ಬೇರೆ ವಾರ್ಡ್‌ಗಳಿಗೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕವಾಗಿ ಅಕ್ರಮ ಎಸೆಯುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನಿಂದಲೇ ಮತಚೋರಿ

ಒಂದು ಕಡೆಗೆ ಕಾಂಗ್ರೆಸ್ ನಾಯಕರು ಮತ ಚೋರಿ ಎಂದು ದೇಶದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷದವರೇ ಮತ ಚೋರಿ ಮಾಡುತ್ತಿದ್ದಾರೆ. ನೆಹರು ಅವರಿಂದ ಸೋನಿಯಾಗಾಂಧಿ ವರೆಗೂ ಈ ಅಕ್ರಮ ಮಾಡಿಕೊಂಡೇ ಗೆದ್ದು ಬಂದಿದ್ದಾರೆ. ಈಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಬೆಲೆ ಇಲ್ಲ. ಇದು ಬರೀ ಹುನಗುಂದ ಕ್ಷೇತ್ರ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಯಲ್ಲಿ ಸೋಲುವ ಭೀತಿಯಿಂದ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡುತ್ತಿದೆ ಎಂದು ದೂರಿದ ಅವರು, ಈ ಬಗ್ಗೆ ರಾಜ್ಯ ಚುನಾವಣಾ ಅಧಿಕಾರಿಗಳಿಗೂ ದೂರು ಕೊಡುತ್ತೇವೆ. ಇಲ್ಲಿ ಬರೀ ಬಿಎಲ್‌ಒ ವಿರುದ್ಧ ಕ್ರಮ ತೆಗೆದುಕೊಳ್ಳದೇ ಹಿರಿಯ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ರಾಹುಲ್ ಗಾಂಧಿಯ ನಾಲಿಗೆ, ಮೆದುಳಿಗೆ ಲಿಂಕ್ ಇಲ್ಲವಾಗಿದೆ. ಹೀಗಾಗಿ ಮತ ಚೋರಿ ಎಂದು ತಿರುಗಾಡುತ್ತಿದ್ದಾರೆ. ಮಾಡಲು ಬೇರೆ ಕೆಲಸ ಇಲ್ಲ. ಸಂಸತ್ ಅಧಿವೇಶನ ನಡೆದಾಗ ವಿದೇಶಕ್ಕೆ ಹೋಗಿದ್ದ. ಮುಗಿದ ಮೇಲೆ ವಾಪಸ್ಸು ಬಂದ. ಈಗ ಜ. 9 ರ ವರೆಗೆ ಮತ್ತೆ ವಿದೇಶಕ್ಕೆ ಹೋಗಿದ್ದಾರಂತೆ. ಅವರಿಗೆ ಏನು ಮಾತನಾಡಬೇಕು ಎಂದು ತಿಳಿದಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದುತ್ತಾರೆ. ಅದರ ಬಗ್ಗೆ ಮಾಹಿತಿಯೇ ಇರಲ್ಲ ಎಂದು ಲೇವಡಿ ಮಾಡಿದರು.
ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಎಂ.ಎಸ್.ದಡ್ಡೇನವರ, ಡಾ.ಮಹಾಂತೇಶ ಕಡಪಟ್ಟಿ, ಅರವಿಂದ ಮಂಗಳೂರ, ರಾಜು ರೇವಣಕರ, ಬಸವರಾಜ ಹುನಗುಂದ ಮಲ್ಲಯ್ಯ ಮೂಗನೂರಮಠ, ಶ್ರೀಧರ ನಾಗರಬೆಟ್ಟ, ಶಿವಾನಂದ ಸುರಪುರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net