ಬಿಯರ್ ಪ್ರಿಯರಿಗೆ ಸಿಕ್ಕಿಲ್ಲ ಬೆಲೆ ಇಳಿಕೆ ಖುಷಿ !

ಸಾಂದರ್ಭಿಕ ಚಿತ್ರ:
ಸಾಂದರ್ಭಿಕ ಚಿತ್ರ:
Published on
ಅಶೋಕ ಶೆಟ್ಟರ, ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಮದ್ಯದಲ್ಲಿ ಇರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ಸುಂಕ ವಿಽಸುವ ಅಬಕಾರಿ ನೀತಿ ಜಾರಿಗೆ ತಂದಿದೆ. ಆದರೆ, ಬೆಲೆ ಏರಿಕೆ ಬಿಸಿ ಮಾತ್ರ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಿದೆ. ಅದೇ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ಬಿಯರ್ ಬೆಲೆ ಇಳಿಕೆ ಆಗಿದ್ದರೂ ಅದರ ಲಾಭ ಬಿಯರ್ ಪ್ರಿಯರಿಗೆ ಇನ್ನೂ ಸಿಗದಾಗಿದೆ.
ಜಿಲ್ಲೆಯಲ್ಲಿ ಬೆಲೆ ಏರಿಕೆ ಆಗಿರುವ ಮದ್ಯವನ್ನು ಹೆಚ್ಚಿಗೆ ಆಗಿರುವ ಬೆಲೆಗೆ ಮಾರಾಟ ಮಾಡುತ್ತಿರುವ ಮದ್ಯದಂಗಡಿಯವರು ಬಿಯರ್ ಮಾತ್ರ ಹಳೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಹೊಸ ದಾಸ್ತಾನು ಇನ್ನೂ ಬಂದಿಲ್ಲ. ಅದು ಬಂದ ಬಳಿಕ ಬೆಲೆ ಎಷ್ಟು ಎನ್ನುವುದು ಗೊತ್ತಾಗುತ್ತದೆ ಎಂದು ಸಬೂಬು ಹೇಳಿಕೊಂಡು ಬಿಯರ್ ಪ್ರಿಯರನ್ನು ಸುಲಿಗೆ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಬೆಲೆ ಏರಿಕೆಯಾದಾಗ ಕ್ಷಣ ಮಾತ್ರವೂ ಅವಕಾಶ ಇಲ್ಲದೇ ಹಳೇ ಸ್ಟಾಕ್ ಇದ್ದರೂ ಹೆಚ್ಚಿನ ಬೆಲೆಗೆ ಕೊಡುತ್ತಾರೆ. ಮೊನ್ನೆ ಮೊನ್ನೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಗೆ ಆಗುತ್ತದೆ ಎನ್ನುವ ಸುಳಿಯುವ ಸಿಗುತ್ತಿದ್ದಂತೆ ಜಿಲ್ಲೆಯಲ್ಲಿ ಅನೇಕ ಬಂಕ್‌ಗಳು ಪೆಟ್ರೋಲ್, ಡೀಸೆಲ್ ಸ್ಟಾಕ್ ಇಲ್ಲವೆಂದು ಎರಡು ದಿನ ಗ್ರಾಹಕರನ್ನು ಸತಾಯಿಸಿ ಮಧ್ಯರಾತ್ರಿ ಬೆಲೆ ಹೆಚ್ಚಳ ಆಗುತ್ತಿದ್ದಂತೆ ಬೆಳಗ್ಗೆಯಿಂದಲೇ ಹೊಸ ದರದಂತೆ ಪೆಟ್ರೋಲ್ ಡೀಸೆಲ್ ಹಾಕಲು ಆರಂಭಿಸಿದರು.
ಮದ್ಯದ ವಿಚಾರದಲ್ಲೂ ಅದೇ ಆಗಿದೆ. ಕಡಿಮೆ ಬೆಲೆಯ ಮದ್ಯದ ದರ ಹೆಚ್ಚಳ ಆಗುತ್ತಿದ್ದಂತೆ ತಮ್ಮಲ್ಲಿ ಹಳೇ ಸ್ಟಾಕ್ ಇದ್ದರೂ ಸಹ ಎಲ್ಲ ಮದ್ಯದಂಗಡಿಯವರು ಹೊಸ ಬೆಲೆಗೆ ಮಾರಾಟ ಮಾಡಲು ಆರಂಭಿಸಿದ್ದಾರೆ. ಅದೇ ಬಿಯರ್ ವಿಚಾರಕ್ಕೆ ಬಂದರೆ ಕಡಿಮೆ ಬೆಲೆಗೆ ಯಾವೊಂದು ಅಂಗಡಿಯವರು ಕೊಡುತ್ತಿಲ್ಲ. ನಾಲ್ಕೆÊದು ದಿನಗಳಿಂದ ಬಿಯರ್ ಹಳೇ ದರದಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೋಟ್ಯಂತರ ರೂಪಾಯಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ, ಮದ್ಯದಂಗಡಿಯವರು ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಅಬಕಾರಿ ಇಲಾಖೆ ಸಹ ಯಾವುದೇ ಚಕಾರ ಎತ್ತದೇ ಸುಮ್ಮನಿರುವುದು ಅನುಮಾನಗಳಿಗೆ ಕಾರಣವಾಗಿದೆ.
ನೂತನ ಸುಂಕ ನೀತಿಯಿಂದಾಗಿ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು ೧೮೦ ಎಂಎಲ್‌ನ ಕ್ವಾಟರ್ ಬಾಟಲ್‌ಗೆ ಒಸಿ, ವೆಲ್ಲಿಂಗಟನ್, ಹೈವರ್ಡ್ಸ್ ೯೫ ರೂ.ಗಳಿಂದ ೧೧೫ ರೂ. ಗೆ ಹೆಚ್ಚಿಸಿದ್ದು, ಕ್ವಾಟರ್‌ಗೆ ೨೦ ರೂ. ಹೆಚ್ಚಳ ಆಗಿದೆ. ಬೆಂಗಳೂರ ಕ್ವಾಟರ್‌ಗೆ ೮೦ ರೂ.ಗಳಿಂದ ೧೦೦ಕ್ಕೆ ಹೆಚ್ಚಿಗೆ ಆಗಿದೆ. ಬಿಪಿ ವಿಸ್ಕಿ ೧೩೫ ರೂ.ಗಳಿಂದ ೧೫೫ ರೂ. ಪಡೆಯುತ್ತಿದ್ದಾರೆ. ಹಾಗೆಯೇ ಡಿಎಸ್ಪಿ, ಐಬಿಗಳ ಬೆಲೆ ಕ್ವಾಟರ್‌ಗೆ ಹತ್ತು ರೂ. ಕಡಿಮೆ ಪಡೆಯುತ್ತಿದ್ದಾರೆ. ಆದರೆ, ಬಿಯರ್ ಪ್ರಿಮಿಯಂಗೆ ಮಾತ್ರ ಮೊದಲಿನಂತೆ ೧೯೦ ರೂ. ಪಡೆಯುತ್ತಿದ್ದು, ಹೊಸ ದರದಂತೆ ಬಿಯರ್‌ಗೆ ೧೧೦ ರೂ. ಆಗುತ್ತಿದ್ದು, ಹೆಚ್ಚಿನ ಬೆಲೆಯನ್ನೇ ಪಡೆಯುತ್ತಿದ್ದಾರೆ. ಈ ಬಗ್ಗೆ ಮದ್ಯದಂಗಡಿಗಳಲ್ಲಿ ಪ್ರಶ್ನಿಸಿದರೆ ಬಿಯರ್ ಬೆಲೆ ಎಷ್ಟು ಎಂದು ಇನ್ನೂ ಮಾಲೀಕರು ಹೇಳಿಲ್ಲ. ಹೊಸ ದಾಸ್ತಾನು ಬಂದಿಲ್ಲ. ಅದರ ಮೇಲೆ ಎಂಆರ್‌ಪಿ ಎಷ್ಟು ಎನ್ನುವುದು ಗೊತ್ತಾಗಿಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಹೀಗಾಗಿ ಹೊಸ ನೀತಿಯಂತೆ ಮದ್ಯ ಮತ್ತು ಬಿಯರ್ ಬೆಲೆಗಳಲ್ಲಿ ಏರುಪೇರಾಗಿದ್ದು, ಏರಿಕೆ ಬಿಸಿ ಮಾತ್ರ ಮದ್ಯಪ್ರಿಯರಿಗೆ ತಟ್ಟಿದ್ದು, ಇಳಿಕೆಯ ಲಾಭ ಮಾತ್ರ ಅವರಿಗೆ ಕೊಡದೇ ಮದ್ಯದಂಗಡಿಯವರೇ ಹೊಡೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net