ರಬಕವಿ/ಬನಹಟ್ಟಿ: ತಾಲೂಕಿನ ನಾವಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಭಾರ ಗಾಳಿ-ಮಳೆಗೆ ಬಾಳೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಜಗದಾಳ, ಬನಹಟ್ಟಿ ಭಾಗಗಳಲ್ಲಿ ಗಾಳಿಯ ರಭಸ ಹೆಚ್ಚಾಗಿ ಅನೇಕ ಮರಗಳು ಬುಡಸಮೇತ ಉರುಳಿದ್ದು, ಕಟಾವು ಹಂತದಲ್ಲಿದ್ದ ಬಾಳೆ ತೋಟಗಳು ನೆಲಕ್ಕುರುಳಿವೆ.
ಶ್ರೀಶೈಲ ಕಾಂತಿ, ಗುರುಲಿಂಗಪ್ಪ ಶೇಗುಣಸಿ, ಗೋವಿಂದ ಪಾಟೀಲ ಸೇರಿ ಹಲವಾರು ರೈತರ ಬೆಳೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕೈಗೆ ಬಂದ ಬೆಳೆ ಹಾಳಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವಾರವೂ ಇದೇ ರೀತಿ ಗಾಳಿ, ಮಳೆಗೆ ಜಗದಾಳ ಗ್ರಾಮದ ಸುತ್ತ ಬೆಳೆದ ಬಾಳೆ ಹಾನಿಯಾಗಿತ್ತು. ಇದೀಗ ಮತ್ತೇ ಗಾಳಿಗೆ ನಷ್ಟವಾಗಿರುವುದು ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ. ಹಾನಿಗೀಡಾದ ಬೆಳೆಗಳಿಗೆ ಪರಿಹಾರ ನೀಡುವಂತೆ ರೈತರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
"
ತಕ್ಷಣ ನಮ್ಮ ಇಲಾಖೆಯ ಸಿಬ್ಬಂದಿಯನ್ನು ರೈತರ ಜಮೀನಿಗೆ ಕಳುಹಿಸಿ ಗ್ರಾಪಂ ಅಧ್ಯಕ್ಷ ಹಾಗೂ ಅಲ್ಲಿನ ಸಿಬ್ಬಂದಿ ಸಹಕಾರ ಪಡೆದು ಹಾನಿಗೀಡಾದ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿಸಿ, ಸರ್ಕಾರಕ್ಕೆ ಮಾಹಿತಿ ಒದಗಿಸಿ, ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ.