ಬಾಗಲಕೋಟೆ ಪೊಲೀಸ್ ‘ಮಾಸ್ಟರ್ ಪ್ಲಾನ್’

  ಮುಧೋಳ ತಾಲೂಕಿನ ಮಾಲಾಪೂರ ನಾರಾಯಣ ಶಾಲೆಯಲ್ಲಿ ಎಸ್.ಐ. ಶಿವಾನಂದ ಶಾಬಾದಿ ಹಾಗೂ ಚನ್ನವೀರ ಚಲವಾದಿ ಅವರೊಂದಿಗೆ ಮುಖ್ಯ ಶಿಕ್ಷಕ ಶಂಕರ ಹೂಗಾರ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಮುಧೋಳ ತಾಲೂಕಿನ ಮಾಲಾಪೂರ ನಾರಾಯಣ ಶಾಲೆಯಲ್ಲಿ ಎಸ್.ಐ. ಶಿವಾನಂದ ಶಾಬಾದಿ ಹಾಗೂ ಚನ್ನವೀರ ಚಲವಾದಿ ಅವರೊಂದಿಗೆ ಮುಖ್ಯ ಶಿಕ್ಷಕ ಶಂಕರ ಹೂಗಾರ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಮುಂದಾದ ಆರಕ್ಷಕರು
  • ಮಾದಕ ವ್ಯಸನ ಮುಕ್ತ ಕ್ಯಾಂಪಸ್
  • ‘ಮಾದಕ ವ್ಯಸನ ವಿರೋಧಿ ಹಾಗೂ ಜಾಗೃತಿ ಸಮಿತಿ’ ರಚನೆ
ಮುಧೋಳ: ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ರಕ್ಷಿಸಲು ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ. ಜಿಲ್ಲೆಯ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಮಾದಕ ವ್ಯಸನ ವಿರೋಧಿ ಹಾಗೂ ಜಾಗೃತಿ ಸಮಿತಿ’ ರಚನೆ ಮೂಲಕ ಶೈಕ್ಷಣಿಕ ವಲಯವನ್ನು ವ್ಯಸನ ಮುಕ್ತಗೊಳಿಸಲು ಮುಂದಾಗಿದೆ.

ಆತಂಕಕಾರಿ ಸಮೀಕ್ಷೆ

ಜಿಲ್ಲೆಯ ಇತ್ತೀಚಿನ ಸಮೀಕ್ಷೆಯಂತೆ, ಶೇ. 21ರಷ್ಟು ಯುವಕರು ವಿವಿಧ ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದು, ತಂಬಾಕು ಸೇವಿಸುವವರಲ್ಲಿ ಶೇ. 53.85ರಷ್ಟು ಜನ 18-19 ವರ್ಷದೊಳಗಿನವರಾಗಿರುವುದು ಗಂಭೀರ ವಿಷಯವಾಗಿದೆ. ಇದನ್ನು ತಡೆಗಟ್ಟಲು ಇಲಾಖೆಯು ‘ಬ್ರೇಕ್ ದಿ ಸೈಕಲ್’ ಅಭಿಯಾನದಡಿ ಶಿಕ್ಷಣ ಸಂಸ್ಥೆಗಳಿಗಾಗಿ ವಿಶೇಷ ಮಾರ್ಗದರ್ಶಿ ಪುಸ್ತಕವನ್ನೂ ಹೊರತಂದು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ ಪುಸ್ತಕ ಶಾಲಾ ಕಾಲೇಜಿಗೆ ವಿತರಣೆ ಮಾಡುತ್ತದೆ.

ಸಮಿತಿಯ ರಚನೆ ಮತ್ತು ಕಾರ್ಯವೈಖರಿ

ಪ್ರತಿ ಸಂಸ್ಥೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೊಲೀಸ್ ನೋಡಲ್ ಅಧಿಕಾರಿ ಹಾಗೂ ಮನೋ ವೈದ್ಯರನ್ನು ಒಳಗೊಂಡ 6-8 ಜನರು ಒಳಗೊಂಡ ಉದ್ದೇಶಿತ ಮಾದಕ ವ್ಯಸನ ವಿರೋಧಿ ಸಮಿತಿ ರಚನೆಯಾಗಲಿದೆ.
ಈ ಸಮಿತಿಯು ಕ್ಯಾಂಪಸ್‌ನಲ್ಲಿ ನಿಗಾ ವಹಿಸುವುದರ ಜೊತೆಗೆ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಕ್ಯೂರ್ ಕೋಡ್ ಬಳಸಿ ಅನಾಮಧೇಯ ವರದಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಿದೆ. 48 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವ ಈ ವ್ಯವಸ್ಥೆಯಡಿ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಶಿಕ್ಷೆಯ ಬದಲು ಸುಧಾರಣೆ

ಇದು ಆರೋಪ ಮಾಡುವುದಲ್ಲ. ಸರಿಪಡಿಸುವ ಪ್ರಯತ್ನ ಎಂಬ ತತ್ವದ ಮೇಲೆ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಶಂಕಿತ ವಿದ್ಯಾರ್ಥಿಗಳನ್ನು ಗುರುತಿಸಿ, ಕಳಂಕದ ಭಯವಿಲ್ಲದೆ ಅವರಿಗೆ ಕೌನ್ಸಿಲಿಂಗ್, ಪುನರ್ವಸತಿ ಮತ್ತು ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತವೆ.

ಪಾಲಕರು-ಆಡಳಿತದ ಪಾತ್ರ

ಪೋಷಕರು ತಮ್ಮ ಮಕ್ಕಳ ನಡವಳಿಕೆಯನ್ನು ಗಮನಿಸಿ, ಪಾಲಕ- ಶಿಕ್ಷಕರ ಸಂಘಗಳಲ್ಲಿ ಸಕ್ರಿಯರಾಗಬೇಕು. ಕಾಲೇಜುಗಳು ಸ್ವಯಂಪ್ರೇರಿತ ತಪಾಸಣೆ ನಡೆಸುವ ಮೂಲಕ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ತಂಬಾಕು, ಮದ್ಯ ಮತ್ತು ಗಾಂಜಾ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಮಾದಕ ವಸ್ತುಗಳ ಕಪಿಮುಷ್ಟಿಯಿಂದ ಹೊರಬರಲು ಅಥವಾ ಶಂಕಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತುರ್ತು ಸಹಾಯವಾಣಿಯನ್ನು ಸಂಪರ್ಕಿಸ ಬಹುದಾಗಿದೆ. ತುರ್ತು ಪ್ರತಿಕ್ರಿಯೆ ಸೇವೆಗಾಗಿ (ಇಆರ್‌ಎಸ್) 112 ಸಂಖ್ಯೆಗೆ ಕರೆ ಮಾಡಬಹುದು. ಇನ್ನು ಮಾದಕ ದ್ರವ್ಯಕ್ಕೆ ಸಂಬಂಧಿಸಿದ ದೂರು ಅಥವಾ ಮಾಹಿತಿಗಾಗಿ ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ (ಒಂಓಂ) 1933 ಅನ್ನು ಬಳಸಬಹುದು. ಇದರ ಜೊತೆಗೆ, ಜಿಲ್ಲಾ ಪೊಲೀಸ್ ನಿರೀಕ್ಷಣಾ ಕೊಠಡಿಯನ್ನು ನೇರವಾಗಿ ಸಂಪರ್ಕಿಸಲು 9480803900 ಸಂಖ್ಯೆಯು ಲಭ್ಯವಿದ್ದು, ಕರೆ ಮಾಡುವವರ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
"

ಶಾಲೆಯು ಕೇವಲ ಜ್ಞಾನದ ತಾಣವಲ್ಲ, ಬದಲಾಗಿ ವ್ಯಕ್ತಿತ್ವ ನಿರ್ಮಾಣದ ದೇಗುಲವಾಗಿದೆ. ಪೊಲೀಸ್ ಇಲಾಖೆಯ ಈ ಸಮಯೋಚಿತ ಉಪಕ್ರಮಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದು, ಕ್ಯೂಆರ್ ಕೋಡ್ ಮೂಲಕ ಅನಾಮಧೇಯವಾಗಿ ದೂರು ನೀಡುವ ವ್ಯವಸ್ಥೆ ಮಾಡಿದ್ದೇವೆ. ಶಿಕ್ಷೆಯ ಬದಲು ಸುಧಾರಣೆ ಎಂಬ ತತ್ವದಡಿ, ದಾರಿ ತಪ್ಪಿದ ವಿದ್ಯಾರ್ಥಿಗಳನ್ನು ಮರಳಿ ಮುಖ್ಯವಾಹಿನಿಗೆ ತರುವ ಮೂಲಕ ನಮ್ಮ ಕ್ಯಾಂಪಸ್ ಅನ್ನು ಗಾಂಜಾ ಮತ್ತು ತಂಬಾಕು ಮುಕ್ತ ವಲಯವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ.
- ಶಂಕರ ಹೂಗಾರ, ಮುಖ್ಯ ಶಿಕ್ಷಕರು.

"

ವಿದ್ಯಾರ್ಥಿಗಳನ್ನು ಬಂಧಿಸುವುದಕ್ಕಿಂತ ಅವರನ್ನು ಬದುಕಿಸುವುದೇ ನಮ್ಮ ಗುರಿ, ಆದ್ದರಿಂದ ಈ ‘ಮಾಸ್ಟರ್ ಪ್ಲಾನ್’ ಕೇವಲ ಪೊಲೀಸ್ ಕಾರ್ಯಾಚರಣೆಯಲ್ಲ, ಇದೊಂದು ಸಾಮಾಜಿಕ ಜವಾಬ್ದಾರಿ. ‘ಬ್ರೇಕ್ ದಿ ಸೈಕಲ್’ ಅಭಿಯಾನದಡಿ ನಾವು ಜಾಗೃತಿ ಮೂಡಿಸುತ್ತಿದ್ದು, ಬರುವ ದೂರುಗಳಿಗೆ 48 ಗಂಟೆಯೊಳಗೆ ಗೌಪ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಪೋಷಕರು ಮತ್ತು ಶಿಕ್ಷಕರು ಕೈಜೋಡಿಸಿದರೆ, ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡುವ ಮಾದಕ ದ್ರವ್ಯಗಳ ಜಾಲವನ್ನು ಜಿಲ್ಲೆಯಿಂದಲೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಲ್ಲೆವು.
- ಎಸ್.ಎಚ್. ಶಾಬಾದಿ ಎಎಸ್‌ಐ ಮುಧೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net