ಜನರು ಗುಳೆ ಹೋಗುವುದನ್ನು ತಪ್ಪಿಸಿ

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿದರು. ಸಂಸದರಾದ ಗೋವಿಂದ ಕಾರಜೋಳ, ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಟಿ. ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತರ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿದರು. ಸಂಸದರಾದ ಗೋವಿಂದ ಕಾರಜೋಳ, ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಟಿ. ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸರ್ಕಾರಕ್ಕೆ ಆಗ್ರಹ |
  • ಬಿಜೆಪಿ ಕಚೇರಿಯಲ್ಲಿ ಹಿರಿಯ ಮುಖಂಡರ ಜತೆ ಸುದ್ದಿಗೋಷ್ಠಿ
ಬಾಗಲಕೋಟೆ: ರಾಜ್ಯ ಭೀಕರ ಬರ ಎದುರಿಸುತ್ತಿದೆ. ಪ್ರಸಕ್ತ ಮುಂಗಾರಿನಲ್ಲಿ ಶೇ. 60ರಷ್ಟು ಮಳೆ ಕೊರತೆ ಅನುಭವಿಸುತ್ತಿದ್ದು, ಅಕಾಲಿಕ ಮಳೆಯಿಂದ ಸಮಸ್ಯೆ ಆಗುತ್ತಿದೆ. ಇದರಿಂದ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಅನೇಕ ಕಡೆಗೆ ಊರಿಗೆ ಊರು ಖಾಲಿ ಆಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ, ಯಾರೂ ಗುಳೆ ಹೋಗದಂತೆ ತಮ್ಮ ಊರಲ್ಲಿ ಇದ್ದುಕೊಂಡು ಕೆಲಸ ಮಾಡುವಂತೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಬುಧವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 8250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಿ ಎಂದು ಒಂದು ವಿರೋಧ ಪಕ್ಷವಾಗಿ ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದರು.
ರಾಜ್ಯ ಕುಡಿವ ನೀರಿಗಾಗಿ ಪರಿತಪಿಸುವಂತಾಗಬಾರದು. ಲಭ್ಯ ಜಲಸಂಪನ್ಮೂಲವನ್ನು ಕುಡಿವ ನೀರು, ಜಾನುವಾರುಗಳಿಗೆ ಮೇವು ಬೆಳೆಯಲಷ್ಟೆ ಬಳಕೆ ಮಾಡಲು ಎಸ್‌ಒಪಿ ರೂಪಿಸಬೇಕು. ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಸಾಗಾಟ ಆಗದಂತೆ ಎಚ್ಚರ ವಹಿಸಬೇಕು. ಅಗತ್ಯ ಇರುವ ಕಡೆಗೆ ಮೇವು ಬ್ಯಾಂಕ್, ಗೋಶಾಲೆಗಳನ್ನು ಆರಂಭಿಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಬರದ ಹಿನ್ನೆಲೆಯಲ್ಲಿ ಪಿಎಂ ಕೃಷಿ ಸಮ್ಮಾನ ಯೋಜನೆ ಅಡಿಗೆ ಕೇಂದ್ರ ಸರ್ಕಾರ ರೈತರಿಗೆ ಕೊಡುವ ಪ್ರೋತ್ಸಾಹ ಧನಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ಹಣ ಕೊಡಬೇಕು. ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಸ್ಥಳೀಯವಾಗಿ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ಕೊಡಬೇಕು ಎಂದರು.

ಜನರು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು

ಕೃಷ್ಣಾ ಮೇಲ್ದಂಡೆ ಯೋಜನೆಗೆ 75 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ನೆನಪಿಸುತ್ತೇವೆ. ಮುಳುಗಡೆ ಜಮೀನಿಗೆ 40 ಲಕ್ಷ ರೂ. ಪರಿಹಾರ ಘೋಷಿಸಿದ್ದು ಸಂತೋಷ. ಇದರಿಂದ ಯೋಜನೆಗೆ 1.25 ಲಕ್ಷ ಕೋಟಿ ರೂ. ಅನುದಾನ ಬೇಕು ಎಂದು ಅಂದಾಜಿಸಿದ್ದೀರಿ. ಅದಕ್ಕೆ ತಕ್ಕಂತೆ ಹಣ ಕ್ರೋಢೀಕರಣ ಮಾಡಿ. ಯುಕೆಪಿ ಯೋಜನೆ ಪೂರ್ಣಗೊಳ್ಳದೇ ಯೋಜನೆ ಆರಂಭದ ಶತಮಾನೋತ್ಸವ ಆಚರಣೆ ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ. ಜನರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಹೀಗಾಗಿ ಯುಕೆಪಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ಕೊಡುವಂತೆ ಸಲಹೆ ನೀಡಿದರು.
ಬಾಗಲಕೋಟೆ ಮೆಡಿಕಲ್ ಕಾಲೇಜು, ಜವಳಿ ಪಾರ್ಕ್, ಬೀಳಗಿ ಏತ ನೀರಾವರಿ, ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಹಬ್ ನಿಮ್ಮ ಘೋಷಣೆಗಳನ್ನು ಯಾವಾಗ ಕಾರ್ಯಾರಂಭ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಎಸ್‌ಐಆರ್ ಬಗ್ಗೆ ತಕರಾರು ಏಕೆ?

ದೇಶದಲ್ಲಿ ಈಗ ನಡೆಯುತ್ತಿರುವುದು 10ನೇ ಎಸ್‌ಐಆರ್. ರಾಜ್ಯದಲ್ಲಿ 8 ಎಸ್‌ಐಆರ್‌ಗಳು ಕಾಂಗ್ರೆಸ್ ಸರ್ಕಾರ ಇದ್ದಾಗಲೇ ನಡೆದಿವೆ. ಆಗ ಸುಮ್ಮನಿದ್ದವರು ಈಗ ಏಕೆ ತಕರಾರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ ಸಿ.ಟಿ. ರವಿ, ಬಿಜೆಪಿಗೆ ಎಸ್‌ಐಆರ್ ಬಗ್ಗೆ ತಕರಾರು ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ನಮ್ಮ ತಕರಾರು ಇದೆ. ಮನೆ ಮನೆಗೆ ತೆರಳಿ -ರ‍್ಮ್ ಕೊಡುವ ಬದಲಿಗೆ ಬಲ್ಕ್ ಆಗಿ -ರ‍್ಮ್ಗಳನ್ನು ವಿತರಿಸುವ ಮೂಲಕ ಅಧಿಕೃತ ಮತದಾರರನ್ನು ಹೊರಗಿಟ್ಟು, ಅನರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕೆಲಸ ನಡೆದಿದೆ. ಆ ಮೂಲಕ ಎಸ್‌ಐಆರ್ ಉದ್ದೇಶವನ್ನು ವಿಫಲಗೊಳಿಸುವ ಕೆಲಸವನ್ನು ರಾಜ್ಯ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ರಾಜಶೇಖರ ಶೀಲವಂತರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಟಿ. ಪಾಟೀಲ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net