ಬಾಗಲಕೋಟೆ ಜಿ.ಪಂ. ಸಭಾ ಭವನದಲ್ಲಿ ಮಂಗಳವಾರ ಜಿ.ಪಂ. ಸಿಇಒ ಗಜಾನನ ಬಾಲೆ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಲಿಂಕ್ ಡಾಕ್ಯೂಮೆಂಟ್ ಹಾಗೂ ಅನಿಬಂಧಿತ ಅನುದಾನದ ವಾರ್ಷಿಕ ಕ್ರಿಯಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಮುಖ್ಯ ಲೆಕ್ಕಾಧಿಕಾರಿ ಸಿದ್ಧರಾಮೇಶ್ವರ ಉಕ್ಕಲಿ ಇದ್ದರು.
ಬಾಗಲಕೋಟೆ:ಪ್ರಸಕ್ತ ಸಾಲಿನಲ್ಲಿ ಅನುಮೋದನೆಗೊಂಡ ಸಿವಿಲ್ ಕಾಮಗಾರಿಗಳಿಗೆ ಆಗಸ್ಟ್ ತಿಂಗಳ ಒಳಗಡೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಪ್ರಸಕ್ತ ಸಾಲಿನ ಲಿಂಕ್ ಡಾಕ್ಯೂಮೆಂಟ್ ಹಾಗೂ ಅನಿರ್ಬಂಽತ ಅನುದಾನದ ವಾರ್ಷಿಕ ಕ್ರಿಯಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಿರ್ಬಂದಿತ ಅನುದಾನದಡಿ ಕೈಗೊಳ್ಳಬೇಕಾದ ಕಾಮಗಾರಿಗಳು, ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ವಾರ್ಷಿಕ ಕ್ರೀಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ನಿರ್ದೇಶಿಸಿದರು.
ಕ್ರಿಯಾ ಯೋಜನೆ ಅನುಮೋದನೆಗೊಂಡ ಮೇಲೆ ಮೊದಲ ಹಂತವಾಗಿ ನಿಗದಿಪಡಿಸಿದ ಅನುದಾನದಲ್ಲಿ ಪೇಮೆಂಟ್ ಆಗಬೇಕು. ವಿವಿಧ ಇಲಾಖೆಗಳ ಸ್ಟೇಷನರಿ ಖರೀದಿಗೆ ಒಂದು ಅವಧಿಗೆ ಮಾತ್ರ ಅನುಮೋದನೆ ನೀಡಲಾಗುತ್ತದೆ. ಕಾಮಗಾರಿಗಳ ದುರಸ್ತಿ ಕೆಲಸಗಳಿಗೆ ಪಡೆದ ಅನುದಾನದಲ್ಲಿ ಸರಿಯಾಗಿ ಕೆಲಸ ಆಗಿರುವ ಬಗ್ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಮಗಾರಿ ಗುಣಮಟ್ಟದಿಂದ ಕೂಡಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಈ ವರ್ಷ ತೆಗೆದುಕೊಂಡಿದ್ದ ದುರಸ್ತಿ ಕಾಮಗಾರಿಗಳನ್ನು ಮತ್ತೆ ಮುಂದಿನ ವರ್ಷವೂ ತೆಗೆದುಕೊಂಡಿರುವುದು ಕಂಡು ಬಂದರೆ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಔಷಧ, ಶಾಲೆಗಳಿಗೆ ಡೆಸ್ಕ್ ಹಾಗೂ ಕ್ರೀಡಾ ಸಾಮಗ್ರಿಗಳ ಖರೀದಿ ಕಾರ್ಯ ಅಕ್ಟೋಬರ್ ಅಥವಾ ಡಿಸೆಂಬರ್ ಮಾಹೆಯಲ್ಲಿ ಪೂರ್ಣಗೊಳಿಸಬೇಕು. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ನಿರ್ವಹಣೆಗೆ ತಮ್ಮ ಹಂತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸೂಚನೆ ನೀಡಿದರು.
ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ನೂರಕ್ಕೆ ನೂರರಷ್ಟು ನನ್ನಿಂದ ಎಲ್ಲ ರೀತಿಯ ಸಹಕಾರ ನಿಮಗೆ ದೊರೆಯುತ್ತದೆ. ಕೆಲಸ ಆಗಿಲ್ಲ ಎಂದರೆ ನಾನು ಕೇಳಲ್ಲ. ನಿಮ್ಮ ಮೇಲೆ ಸೂಕ್ರ ವಹಿಸಲಾಗುತ್ತದೆ ಎಂದು ಎಚ್ಚರಿಸಿದರು.
ಕಚೇರಿಗೆ ಬರುವ ಜನ ಸಾಮಾನ್ಯರಿಗೆ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ತಲುಪಿಸುವ ಕೆಲಸವಾಗಬೇಕು. ಕಚೇರಿಯಿಂದ ಹೊರಗೆ ಹೋಗುವಾಗ ಸಂತೋಷದಿಂದ ಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವಸತಿ ನಿಲಯಗಳಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ಕಲ್ಪಿಸಬೇಕು. ಅನಿರೀಕ್ಷಿತವಾಗಿ ಭೇಟಿ ನೀಡಿದ ಸಮಯದಲ್ಲಿ ಅವ್ಯವಸ್ಥೆ ಕಂಡುಬಂದಲ್ಲಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದರು.
ಅನುದಾನ ಸದ್ಬಳಕೆ, ಯೋಜನೆಗಳ ಸಕಾಲಿಕ ಅನುಷ್ಠಾನ ಹಾಗೂ ಗುರಿ ಸಾಧನೆಗೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಮತ್ತು ಪಾದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಮುಖ್ಯ ಲೆಕ್ಕಾಧಿಕಾರಿ ಸಿದ್ಧರಾಮೇಶ್ವರ ಉಕ್ಕಲಿ ಮತ್ತಿತರರು ಇದ್ದರು.