ಕಲಾವಿದರು ನೈಜ ಗಾಯನಕ್ಕೆ ಹೆಚ್ಚಿನ ಆದ್ಯತೆ ನೀಡಲಿ

 ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಆರ್.ಕೆ. ಫೌಂಡೇಷನ್  ಆಯೋಜಿಸಿದ್ದ ಸಂಗೀತ ಸುಧೆ ಕಾರ್ಯಕ್ರಮವನ್ನು ಖ್ಯಾತ ಸಂಗೀತಗಾರ ಸಿದ್ದರಾಜ ಪೂಜಾರಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ತುಂಗಳ, ಭಾವುರಾಜ ತುಬಚಿ, ಜಿ.ಆರ್. ಕುಲಕರ್ಣಿ, ಶಿವಾನಂದ ಮಹಾರಾಜರು, ಪ್ರಕಾಶ ರಾವಳ ಇತರರಿದ್ದರು.
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಆರ್.ಕೆ. ಫೌಂಡೇಷನ್ ಆಯೋಜಿಸಿದ್ದ ಸಂಗೀತ ಸುಧೆ ಕಾರ್ಯಕ್ರಮವನ್ನು ಖ್ಯಾತ ಸಂಗೀತಗಾರ ಸಿದ್ದರಾಜ ಪೂಜಾರಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ತುಂಗಳ, ಭಾವುರಾಜ ತುಬಚಿ, ಜಿ.ಆರ್. ಕುಲಕರ್ಣಿ, ಶಿವಾನಂದ ಮಹಾರಾಜರು, ಪ್ರಕಾಶ ರಾವಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಸಂಗೀತಗಾರ ಸಿದ್ದರಾಜ ಪೂಜಾರಿ ಹೇಳಿಕೆ
  • ಸಂಗೀತ ಸುಧೆ ಕಾರ್ಯಕ್ರಮ
  • ಇತ್ತೀಚಿನ ದಿನಗಳಲ್ಲಿ ಕರೋಕೆ ಸಂಸ್ಕೃತಿಯ ಅತಿಯಾದ ಬಳಕೆಯಿಂದ ಮೂಲ ಸಂಗೀತದ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಬಕವಿ/ಬನಹಟ್ಟಿ:

ಸಂಗೀತವು ಭಾಷೆ, ಜಾತಿ, ಧರ್ಮ ಹಾಗೂ ಪ್ರಾಂತ್ಯಗಳ ಎಲ್ಲೆಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಬೆಸೆಯುವ ವಿಶ್ವಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿಯ ಜೀವಾಳವಾಗಿದೆ ಎಂದು ಖ್ಯಾತ ಸಂಗೀತಗಾರ ಸಿದ್ದರಾಜ ಪೂಜಾರಿ ಹೇಳಿದರು.

ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ರಾತ್ರಿ ಆರ್.ಕೆ. ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಂಗೀತ ಸುಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕರೋಕೆ ಸಂಸ್ಕೃತಿಯ ಅತಿಯಾದ ಬಳಕೆಯಿಂದ ಮೂಲ ಸಂಗೀತದ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಲಾವಿದರು ಸ್ವರಶುದ್ಧಿ, ಲಯಬದ್ಧತೆ ಹಾಗೂ ನೈಜ ಗಾಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ, ಅದು ಮನಸ್ಸನ್ನು ಪರಿಶುದ್ಧಗೊಳಿಸಿ ಆತ್ಮೀಯತೆ, ಸಾಮರಸ್ಯ ಹಾಗೂ ಸಾಮಾಜಿಕ ಸೌಹಾರ್ದವನ್ನು ಬೆಳೆಸುವ ದಿವ್ಯಸಾಧನೆ. ನಿರಾಕಾರ ಪರಮಾತ್ಮನನ್ನು ಸ್ವರಗಳ ಮೂಲಕ ಸಾಕಾರಗೊಳಿಸುವ ಶಕ್ತಿ ಸಂಗೀತಕ್ಕಿದ್ದು, ಪ್ರತಿಯೊಬ್ಬ ಸಂಗೀತ ಸಾಧಕನು ಶಾಸ್ತ್ರೀಯ ಹಾಗೂ ಶುದ್ಧ ಸ್ವರಾಭ್ಯಾಸವನ್ನು ನಿರಂತರವಾಗಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಗುರುಭಕ್ತಿ, ಶಿಸ್ತು ಮತ್ತು ನಿರಂತರ ಸಾಧನೆಯೇ ಸಂಗೀತ ಕ್ಷೇತ್ರದಲ್ಲಿ ಯಶಸ್ಸಿನ ಮೂಲಮಂತ್ರವಾಗಿದ್ದು, ಭಾರತೀಯ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಕಲಾವಿದರ ಮೇಲಿದೆ. ಕಲೆಗಳು ಜೀವಂತವಾಗಿರುವ ಸಮಾಜವೇ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುತ್ತದೆ. ಭಾರತೀಯ ಸಂಗೀತದಲ್ಲಿ ನಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನಮೌಲ್ಯಗಳು ಅಡಕವಾಗಿವೆ ಎಂದು ಹೇಳಿದರು.
ಯುವ ಸಂಗೀತಗಾರ ಭಾವುರಾಜ ತುಬಚಿ ಮಾತನಾಡಿ, ಸಂಗೀತವು ವ್ಯಕ್ತಿತ್ವ ವಿಕಾಸದ ಜೊತೆಗೆ ಸಂಸ್ಕಾರ, ಸಾಮರಸ್ಯ ಹಾಗೂ ಸೌಹಾರ್ದವನ್ನು ಬೆಳೆಸುವ ಶಕ್ತಿಯಾಗಿದೆ. ಇಂತಹ ಕಾರ್ಯಕ್ರಮಗಳು ಭಾರತೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಬಳಿಕ ಭಾವುರಾಜ ತುಬಚಿ ಹಾಗೂ ಅವರ ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈಶ್ವರಲಿಂಗ ಮೈದಾನದಲ್ಲಿ ಸಂಗೀತಾಸಕ್ತರ ಭಾರೀ ಜನಸ್ತೋಮ ನೆರೆದಿದ್ದು, ಚಪ್ಪಾಳೆಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿತು.
ಜಿ.ಆರ್. ಕುಲಕರ್ಣಿ, ಶಿವಾನಂದ ಮಹಾರಾಜರು, ಮಲ್ಲಿಕಾರ್ಜುನ ತುಂಗಳ, ಪ್ರಕಾಶ ರಾವಳ, ಪ್ರಕಾಶ ಕೋಪರ್ಡೆ, ರಾಜಶೇಖರ ಕರಲಟ್ಟಿ, ಶಂಕರ ಜಾಲಿಗಿಡದ ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net