ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಂ ಪ್ರೇರಿತವಾಗಿ ಹಾಗೂ ಕಡ್ಡಾಯವಾಗಿ ಭಾಗವಹಿಸಬೇಕು
ರಬಕವಿ/ಬನಹಟ್ಟಿ:ದೇಶದಲ್ಲಿ ರಾಷ್ಟ್ರಾಭಿಮಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರತಿಯೊಬ್ಬ ನಾಗರಿಕನು ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಂ ಪ್ರೇರಿತವಾಗಿ ಹಾಗೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಗಣರಾಜ್ಯೋತ್ಸವವನ್ನು ಸಂಭ್ರಮ ಮತ್ತು ಶಿಸ್ತುಬದ್ಧವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವಾಡಿಕೆಯಂತೆ ಜ. 26ರಂದು ಬೆಳಗ್ಗೆ 9ಕ್ಕೆ ರಬಕವಿ ನಗರದ ಎಂ.ವಿ. ಪಟ್ಟಣ ಶಿಕ್ಷಣ ಸಂಸ್ಥೆ ಪಕ್ಕದ ರಾಮಪ್ಪ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದೆ. ಪ್ಲಾಸ್ಟಿಕ್ ಧ್ವಜಗಳ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಪಂಚಾಯತ್ ಇಒ ಸಿದ್ದಪ್ಪ ಪಟಿಹಾಳ, ಶಿರಸ್ತೆದಾರ ಆರ್.ಎಸ್. ಸಾತಿಹಾಳ, ಬಿಇಒ ಎ.ಕೆ. ಬಸಣ್ಣವರ, ಜಿಎಲ್‌ಬಿಸಿ ಶ್ರೀಧರ ನಂದ್ಯಾಳ, ಪಿಎಸ್‌ಐ ಶಾಂತಾ ಹಳ್ಳಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.