ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಮುಖಂಡರಾದ ಸವಿತಾ ಲಂಕೆನ್ನವರ, ಶೋಭಾ ರಾವ, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮಿತಾ ಪವಾರ, ಪ್ರೇಮಾ ಅಂಬಿಗೇರ ಇತರರಿದ್ದರು.
ಬಾಗಲಕೋಟೆ: ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆಯಬೇಕು ಎನ್ನುವ ಕಾರಣಕ್ಕೆ ಶೇ.33ರಷ್ಟು ಮೀಸಲಾತಿ ಕಾಯ್ದೆ ಜಾರಿಗೆ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರಲು ಮುಂದಾಗಿತ್ತು, ಆದರೇ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಮಹಿಳಾ ವಿರೋಧಿ ನಿಲುವು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸಂಜೆ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ನಾರಿ ಶಕ್ತಿ ವಂದನ ಕಾಯ್ದೆ ಸೋಲಿಸುವ ಮೂಲಕ ಮಹಿಳೆಯರ ಹಕ್ಕು ಕಸಿದುಕೊಂಡಿದೆ. ಬಿಜೆಪಿ ರಾಷ್ಟ್ರ, ಜನಪರ, ಮಹಿಳೆಯರ ಧ್ವನಿಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಕೊಡಲಿ ಪೆಟ್ಟು ನೀಡಿದೆ. ಮಹಿಳೆಯರ ವಿರೋಧಿ ಎನ್ನುವುದು ಕಾಂಗ್ರೆಸ್ ಸಾಬೀತು ಪಡಿಸಿದೆ. ಮಹಿಳೆಯರಿಗೆ ಹಕ್ಕು ಸಿಗಬಾರದು ಎನ್ನುವುದೇ ಕಾಂಗ್ರೆಸ್ ಅಜೆಂಡಾ. ಶೇ. 33 ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ನಿಲವು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು
.
ವಿಧಾನ ಪರಿಷತ್ತ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಮಹಿಳೆಯರ ಹಕ್ಕುಗಳು ಸಮಾಧಿಯಾಗುವುದನ್ನು ತನ್ನ ಜಯ ಎಂದು ಹೆಮ್ಮೆ ಪಡುವ ಕಾಂಗ್ರೆಸ್‌ನ ಮನಸ್ಥಿತಿ ಎಂತಹ ಕ್ರೂರ ಮನಸ್ಥಿತಿ ಇರಬೇಕು?. ಇದು ಕಾಂಗ್ರೆಸ್ಸಿಗರ ಮಹಿಳಾ ವಿರೋಧಿ ಧೋರಣೆ ಎತ್ತಿ ತೋರಿಸಿದೆ. ಅವರ ದೃಷ್ಟಿಯಲ್ಲಿ ಮಹಿಳೆಯರು ಕೇವಲ ಘೋಷಣೆಗಳಿಗೆ ಸೀಮಿತವಾಗಬೇಕೇ ಹೊರತು ಅಧಿಕಾರಕ್ಕೆ ಬರಬಾರದು ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಈ ದ್ರೋಹ ಪ್ರತಿಯೊಬ್ಬ ಮಹಿಳೆಯೂ, ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಖಂಡಿಸಬೇಕು ಎಂದು ತಿಳಿಸಿದರು.
ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ ಮಜ್ಜಗಿ ಮಾತನಾಡಿ, ಕಾಂಗ್ರೆಸ್ ಗುರಿ ಕೇವಲ ಚುನಾವಣೆ ಗೆಲ್ಲುವುದು ಹೊರತು ದೇಶದ ಪ್ರಗತಿ, ಮಹಿಳೆಯರ ಏಳಿಗೆ ಅಲ್ಲ. ಬಿಜೆಪಿಯವರು ರಾಷ್ಟ್ರ ಕಲ್ಯಾಣ ಗುರಿ ಹೊಂದಿದೆ. ನಮಗೆ ಯಾವಾಗಲೂ ದೇಶ ಮತ್ತು ದೇಶದ ಜನತೆಯೇ ಮೊದಲ ಆದ್ಯತೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ನ್ಯಾಯ ಒದಗಿಸುವುದೇ ನಮ್ಮ ಸಂಕಲ್ಪ ಎಂದರು.