ಅಂಬಿಗ ಸಮಾಜ ಶೈಕ್ಷಣಿಕವಾಗಿ ಪ್ರಗತಿ

 ಬಾಗಲಕೋಟೆಯ ಕಲಾ ಭವನದಲ್ಲಿ ಭಾನುವಾರ ಅಂಬಿಗ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಮಾಜದ ಮುಖಂಡರು ಮತ್ತು ಸ್ವಾಮೀಜಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಉದಯ ಅಂಬಿಗೇರ, ಎಂ. ಮೌಲಾಲಿ, ನಾಗೇಂದ್ರ ಹೊನ್ನಳ್ಳಿ ಮತ್ತಿತರರು ಇದ್ದರು.
ಬಾಗಲಕೋಟೆಯ ಕಲಾ ಭವನದಲ್ಲಿ ಭಾನುವಾರ ಅಂಬಿಗ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಮಾಜದ ಮುಖಂಡರು ಮತ್ತು ಸ್ವಾಮೀಜಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಉದಯ ಅಂಬಿಗೇರ, ಎಂ. ಮೌಲಾಲಿ, ನಾಗೇಂದ್ರ ಹೊನ್ನಳ್ಳಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಅಧ್ಯಕ್ಷ ಉದಯ ಅಂಬಿಗೇರ ಹೇಳಿಕೆ
  • ಕಲಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ
  • ಸಮಾಜದಲ್ಲಿ ಕ್ರಾಂತಿ ಆಗಬೇಕಿದ್ದರೆ ಮೊದಲು ಶೈಕ್ಷಣಿಕ ಕ್ರಾಂತಿಯಾಗಬೇಕು
ಬಾಗಲಕೋಟೆ: ಸಮಾಜದಲ್ಲಿ ಕ್ರಾಂತಿ ಆಗಬೇಕಿದ್ದರೆ ಮೊದಲು ಶೈಕ್ಷಣಿಕ ಕ್ರಾಂತಿಯಾಗಬೇಕು. ಇವತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಅಂಬಿಗ ಸಮಾಜದ ಮಕ್ಕಳು ಸಹ ಮುಂದುವರಿದ ಸಮಾಜದ ಮಕ್ಕಳೊಂದಿಗೆ ಶಿಕ್ಷಣದಲ್ಲಿ ಪ್ರತಿಸ್ಪರ್ಧೆ ನೀಡುತ್ತಿರುವುದು ಅತ್ಯಂತ ಖುಷಿ ನೀಡುವ ವಿಚಾರ ಎಂದು ಅಂಬಿಗ ಸಮಾಜದ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಉದಯ ಅಂಬಿಗೇರ ಹೇಳಿದರು.
ನವನಗರದ ಕಲಾ ಭವನದಲ್ಲಿ ಭಾನುವಾರ ಅಂಬಿಗ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆ ಬಡ ವಿದ್ಯಾರ್ಥಿಗಳು ಸಮಾಜ ಪ್ರಾರಂಭಿಸಿರುವ ವಿದ್ಯಾಸಿರಿ ಯೋಜನೆಯ ಲಾಭ ಪಡೆಯಬೇಕು. ಸಮಾಜದಲ್ಲಿ ಇಂದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಒಟ್ಟು 300ಕ್ಕೂ ಹೆಚ್ಚು ಮಕ್ಕಳು ಸಾಧನೆ ಮಾಡಿದ್ದು ಶ್ಲಾಘನೀಯ. ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಿದ್ದು ಅವರಿಗೆ ಪಾಲಕರು ಸಹಕಾರ ನೀಡಬೇಕು, ಸಮಾಜ ಕೂಡಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಸಮಾಜದ ಮಾಜಿ ಅಧ್ಯಕ್ಷ ಎಂ. ಮೌಲಾಲಿ ಮಾತನಾಡಿ, ಅಂಬಿಗ ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಎಸ್‌ಟಿ ಸೇರ್ಪಡೆಯ ಫೈಲ್ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು ಸದ್ಯದಲ್ಲಿ ಅದು ಅನುಮೋದನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಬಿಗ ನೌಕರರ ಸಂಘದ ಅಧ್ಯಕ್ಷ ಎಂ. ಶ್ರೀನಿವಾಸ ಮಾತನಾಡಿ, ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ. ಆದಷ್ಟೂ ಅದರಿಂದ ದೂರವಿಡಿ. ಮಕ್ಕಳ ಬಗ್ಗೆ ನಿಗಾವಹಿಸಿ. ಅವರು ವಿದ್ಯಾವಂತರಾದರೆ ಸಮಾಜ ಬಲಿಷ್ಟಗೊಳ್ಳಲಿದೆ. ಸಮಾಜ ಸಂಘಟನೆ ಬಗ್ಗೆ ಹೆಚ್ಚು ಗಮನಕೊಡಬೇಕು. ಅಂದಾಗ ರಾಜಕೀಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು, ಸಮಾಜದ ನೌಕರರ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಮಧ್ಯ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಸಮಾಜ ಬಾಂಧವರ ಸಮ್ಮುಖದಲ್ಲಿ ನಡೆಸಲಾಗುವುದು ಎಂದರು.
ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಉತ್ತಮ ನಾಗರಿಕರಾಗಬೇಕು. ಗಂಗಾ ವಿದ್ಯಾಸಿರಿ ಯೋಜನೆಯಲ್ಲಿ ಸುಮಾರು 70 ಲಕ್ಷ ಹಣವನ್ನು ಸಂಗ್ರಹಿಸಿದ್ದು, ಈ ಹಣದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯಕ ಮಾಡಲಾಗುವುದು ಎಂದು ತಿಳಿಸಿದರು.
ಅಂಬಿಗ ಸಮಾಜದ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಕೋಳಿ, ನಾಗಪ್ಪ ಅಂಬಿ, ಎಂ.ಬಿ ಅಂಬಿಗೇರ, ಚಿನ್ನು ಅಂಬಿ, ಶ್ರೀಕಾಂತ ಕಟ್ಟಿಮನಿ, ಎಚ್.ಸಿ. ಅಂಬಿಗೇರ, ಪುಂಡಲೀಕ ಕರೇಣಿ, ಸಿ.ಆರ್. ಕೋಲ್ಕಾರ, ಶಿವಾನಂದ ಗೋಕಾವಿ, ಚಂದ್ರು ಅಂಬಿಗೇರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net