ಮನಮಿಡಿಯುವ ಘಟನೆಗಳು, ಸುಂದರವಾದ ಅಂಶಗಳಿಂದ ಕತೆಗಳು ಗಮನ ಸೆಳೆಯುತ್ತವೆ
ರಬಕವಿ/ಬನಹಟ್ಟಿ : ರಬಕವಿಯ ಹಿರಿಯ ಸಾಹಿತಿ, ಕವಿ, ವಿಮರ್ಶಕ ಸಿದ್ಧರಾಜ ಪೂಜಾರಿಯವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಸಣ್ಣಕತೆಗಳ ಕಥಾ ವಿಶ್ವ ಕೃತಿಯ ಎಲ್ಲ ಕತೆಗಳು ಅಮೂಲ್ಯ ರತ್ನಗಳಾಗಿವೆ ಎಂದು ಹಿರಿಯ ಸಾಹಿತಿ ಶಿವಾನಂದ ದಾಶಾಳ ಹೇಳಿದರು.
ರಬಕವಿ ವಿದ್ಯಾನಗರದ ಉದ್ಯಮಿ ಮಲ್ಲೇಶಪ್ಪ ಕುಚನೂರ ಅವರ ನಿವಾಸದಲ್ಲಿ ಕಸಾಪ ಜಿಲ್ಲಾ ಘಟಕ, ತಾಲೂಕು ಘಟಕ, ವಲಯ ಮಹಾಲಿಂಗಪುರ ಅವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-57 ಕಾರ್ಯಕ್ರಮದಲ್ಲಿ ಸಿದ್ಧರಾಜ ಪೂಜಾರಿಯವರ ‘ಕಥಾ ವಿಶ್ವ’ ಕೃತಿ ಅವಲೋಕಿಸಿ ಅವರು ಮಾತನಾಡಿ, ಮನಮಿಡಿಯುವ ಘಟನೆಗಳು, ಸುಂದರವಾದ ಅಂಶಗಳಿಂದ ಕತೆಗಳು ಗಮನ ಸೆಳೆಯುತ್ತವೆ. ಕಥಾ ನಿರೂಪಣಾ ಶೈಲಿ ವಿಶಿಷ್ಟವಾಗಿದೆ ಎಂದರು.
ಉದ್ಯಮಿ ಮಲ್ಲೇಶಪ್ಪ ಕುಚನೂರ ಮಾತನಾಡಿ, ಕಸಾಪ ತಾಲೂಕು ಘಟಕದಿಂದ ಇಂತಹ ವೈಶಿಷ್ಟೃ ಪೂರ್ಣ ಕಾರ್ಯಕ್ರಮಗಳು ನಿರಂತರ ನಡೆಯಲಿ. ನುಡಿ ಸೇವೆಗೆ ಎಲ್ಲರ ಸಹಕಾರವಿರಲಿ ಎಂದರು.
ಕೃತಿಕಾರ ಸಿದ್ಧರಾಜ ಪೂಜಾರಿ ಮಾತನಾಡಿ, ಇಂಗ್ಲಿಷ್ ಭಾಷೆಯಲ್ಲಿರುವ ಶ್ರೇಷ್ಠ ಕತೆಗಳನ್ನು ಆಯ್ಕೆ ಮಾಡಿಕೊಂಡು ಕನ್ನಡಕ್ಕೆ ಅನುವಾದಿಸಲಾಗಿದೆ. ಸಾಹಿತ್ಯ ಒಗ್ಗೂಡಿಸುವ ಕಾರ್ಯ ಮಾಡುತ್ತದೆ. ಪ್ರೀತಿ, ಸ್ನೇಹವನ್ನು ಬಿತ್ತುವ ಕೆಲಸ ಮಾಡುತ್ತದೆ. ಎಲ್ಲಭಾಷೆಗಳು ಶ್ರೇಷ್ಠ ಎಂದರು.
ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎಂ.ಎಸ್. ಬದಾಮಿ, ಚಂದ್ರಪ್ರಭಾ ಬಾಗಲಕೋಟೆ, ಡಾ. ರವಿ ಜಮಖಂಡಿ, ಸಂವಾದದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಕಸಾಪ ರಬಕವಿ-ಬನಹಟ್ಟಿ ತಾಲೂಕಾ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, 58ನೆಯ ಪುಸ್ತಕಾವಲೋಕನ ರಬಕವಿ ಉದ್ಯಮಿ ಬಸವರಾಜ ದಲಾಲ ಅವರ ಾರ್ಮ್ ಹೌಸ್‌ನಲ್ಲಿ ಅ.11ರಂದು ನಡೆಯುವುದು. ನ.8ರಂದು ಪುಸ್ತಕವಲೋಕನ 59ನೇ ಕಾರ್ಯಕ್ರಮ ಸವಿತಾ ಹೊಸೂರ ಅವರ ನಿವಾಸದಲ್ಲಿ ನಡೆಯಲಿದೆ ಎಂದರು.
ಮಕ್ಕಳ ಸಾಹಿತಿ ಜಯವಂತ ಕಾಡದೇವರ, ಮಹಾದೇವ ಕವಿಶೆಟ್ಟಿ, ಬಸವರಾಜ ದಲಾಲ, ಬಸಪ್ಪ ತೇರಣಿ, ಚಿದಾನಂದ ಸೊಲ್ಲಾಪುರ, ಪ್ರಭು ಉಮದಿ, ಡಾ. ಜಿ.ಎಚ್. ಚಿತ್ತರಗಿ, ಡಾ. ಸಂಗಮೇಶ ಹತಪಾಕಿ, ಡಾ. ಬಿ.ಎನ್. ಬಾಗಲಕೋಟೆ, ಬಸವರಾಜ ಗುಡೋಡಗಿ, ಅಶೋಕ ಕುಚನೂರ, ಶಿವಾನಂದ ಕೊಳಕಿ, ಸವಿತಾ ಹೊಸೂರ ಇತರರಿದ್ದರು.
ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಪ್ರಾರ್ಥಿಸಿದರು. ಶರತ್ ಜಂಬಗಿ ಸ್ವಾಗತಿಸಿದರು. ದಾನಪ್ಪ ಆಸಂಗಿ ನಿರೂಪಿಸಿದರು. ಗುರುರಾಜ ಖಾಸನೀಸ ವಂದಿಸಿದರು.