ಒಗ್ಗಟ್ಟಿನ ಹೋರಾಟ ಅವಶ್ಯ

ಜಮಖಂಡಿ ನಗರದ ಅಬುಬಕರ ದರ್ಗಾದಲ್ಲಿ ನಡೆದ ಕೌಮಿ ಏಕತಾ ಸಮ್ಮೇಳನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಹಾವೇರಿಯ ಅಲ್ಲಮಪ್ರಭು ಅಹಿಂದ ಪೀಠದ ಮಹೇಶ್ವರಾನಂದ ಸ್ವಾಮೀಜಿ, ಓಲೆಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಇದ್ದರು.
ಜಮಖಂಡಿ ನಗರದ ಅಬುಬಕರ ದರ್ಗಾದಲ್ಲಿ ನಡೆದ ಕೌಮಿ ಏಕತಾ ಸಮ್ಮೇಳನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಹಾವೇರಿಯ ಅಲ್ಲಮಪ್ರಭು ಅಹಿಂದ ಪೀಠದ ಮಹೇಶ್ವರಾನಂದ ಸ್ವಾಮೀಜಿ, ಓಲೆಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
  • ಬದಲಾದ ಭಾರತ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳಿವೆ
  • ದಲಿತರು-ಮುಸ್ಲಿಂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನೆಗಳು ನಡೆಯಬೇಕಿದೆ.
ಜಮಖಂಡಿ: ಕಳೆದ ಹನ್ನೆರಡು ವರ್ಷಗಳಿಂದ ಭಾರತ ಬದಲಾಗಿದೆ. ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳು ಎದುರಾಗಿವೆ. ದಲಿತರು ಹಾಗೂ ಮುಸ್ಲಿಂರ ಸಮಸ್ಯೆಗಳು ಒಂದೇ ಆಗಿವೆ. ಹೀಗಾಗಿ ದಲಿತರು ಮುಸ್ಲಿಂಮರು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಅಬುಬಕರ ದರ್ಗಾ ಮೈದಾನದಲ್ಲಿ ಶಹೀದ ಹಜರತ ಟಿಪ್ಪು ಸುಲ್ತಾನ ಜಯಂತ್ಯುತ್ಸವ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಕೌಮಿ ಏಕತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರು-ಮುಸ್ಲಿಂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನೆಗಳು ನಡೆಯಬೇಕಿದೆ. ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಒಂದೇ ವೇದಿಕೆಗೆ ಬರಬೇಕಾಗಿದೆ ಎಂದ ಅವರು ದೆಹಲಿಗೆ ಹೋಗಲು ಯಾವ ಮಾರ್ಗ ಹಿಡಿಯಬೇಕು ಎಂಬುದರ ಬಗ್ಗೆ ಚಿಂತನೆಗಳು ನಡೆಯಬೇಕು. ಅದಕ್ಕಾಗಿ ಒಗ್ಗಟ್ಟಾಗಬೇಕು ಎಂದು ಹೇಳಿದರು.
ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕು, ಶಿಕ್ಷಣ ಇಲ್ಲದೇ ಬದುಕು ಸಾಗಿಸುವ ಕಾಲ ಈಗಿಲ್ಲ. ಶಿಕ್ಷಣಕ್ಕೆ ಬಹಳ ಮಹತ್ವವಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ದಲಿತರು, ಮುಸ್ಲಿಂರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ತಿಳಿಸಿದರು.
ಟಿಪ್ಪು ಸುಲ್ತಾನರ ಆಡಳಿತ, ಜಾರಿಗೆ ತಂದ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡುವ ಕೆಲಸವಾಗಬೇಕಿದೆ. ಸ್ವಾತಂತ್ರೃ ಹೋರಾಟದಲ್ಲಿ ಅವರ ಪಾತ್ರ, ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡಿದ ಅವರ ದೇಶಭಕ್ತಿ ಕುರಿತು ಮಾಹಿತಿ ನೀಡುವ ಕೆಲಸವಾಗಬೇಕು. ಡಾ. ಅಂಬೇಡ್ಕರ್, ವಿಶ್ವಗುರು ಬಸವಣ್ಣ, ನಾರಾಯಣ ಗುರುಗಳು, ಶಾಹೂ ಮಹಾರಾಜ ಮುಂತಾದ ಮಹಾತ್ಮರ ವಿಚಾರಧಾರೆಗಳು, ದೇಶದ ಇತಿಹಾಸ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಸ್ವಾರ್ಥಕ್ಕಾಗಿ ದೇಶದ ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ. ದೇಶವನ್ನು ಗಟ್ಟಿಯಾಗಿ ಕಟ್ಟಲು ಶ್ರಮಿಸಿದ ಟಿಪ್ಪು ಸುಲ್ತಾನರ ಇತಿಹಾಸ ತಿರುಚುವ ಕೆಲಸ ನಡೆದಿದೆ. ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟಮಾಡಿದರು. ಆಗಿನ ಕಾಲದಲ್ಲೇ ರಾಕೆಟ್ ತಯಾರಿಸಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಅನೇಕ ಮಠ, ಮಂದಿರಗಳನ್ನು ನಿರ್ಮಿಸಿದ್ದರು, ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಅವರ ಇತಿಹಾಸದ ಕುರಿತು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಹಾವೇರಿಯ ಅಲ್ಲಮಪ್ರಭು ಅಹಿಂದ ಪೀಠದ ಮಹೇಶ್ವರಾನಂದ ಸ್ವಾಮೀಜಿ, ಓಲೆ ಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಎಐಎಂಐಎಂ ಪಕ್ಷದ ಅಧ್ಯಕ್ಷ ಲತೀ ಖಾನ ಪಠಾಣ, ಬಿಹಾರದ ಮೌಲಾನಾ ಅಬ್ದುಲ್ಲಾ ಸಾಲೀಂ ಕಮರ ಚತುರ್ವೇದಿ, ಉತ್ತರ ಪ್ರದೇಶದ ಹಜರತ ಪೀರ ಸೈಯದ ಕಾಸಿಂ ಅಶ್ರ, ಬಾಗಲಕೊಟೆಯ ಹಜರತ ಮೌಲಾನಾ ಮೊಹಸೀನ ಅಹಮದ್, ರಾಹುಲ ಕಲೂತಿ, ರಾಜು ಗಸ್ತಿ, ರಿಯಾಜ ಅವಟಿ, ರಫಿಕ್ ಬಾರಿಗಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ಈಶ್ವರ ವಾಳೆಣ್ಣವರ, ರವಿ ಯಡಹಳ್ಳಿ ಇದ್ದರು. ನಜೀರ ಕಂಗನೊಳ್ಳಿ ಸ್ವಾಗತಿಸಿದರು. ಶ್ರೀನಿವಾಸ ಕಟ್ಟಿಮನಿ, ಮಲ್ಲಿಕಾರ್ಜುನ ಮಠ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net