ರಬಕವಿಯಲ್ಲೊಂದು ಅವಿಭಕ್ತ ಕುಟುಂಬ

ರಬಕವಿ ಗುರುದೇವ ಬ್ರಹ್ಮಾನಂದ ನಗರದಲ್ಲಿರುವ ಅವಿಭಕ್ತ ಕುಟುಂಬಕ್ಕೆ ಮಾದರಿಯಾದ ಕುರುಬ ಸಮಾಜದ ಪೂಜಾರಿ ಪರಿವಾರದ ಮದುವೆ ಸಮಾರಂಭದಲ್ಲಿ ತೆಗೆದಿರುವ ಚಿತ್ರ.
ರಬಕವಿ ಗುರುದೇವ ಬ್ರಹ್ಮಾನಂದ ನಗರದಲ್ಲಿರುವ ಅವಿಭಕ್ತ ಕುಟುಂಬಕ್ಕೆ ಮಾದರಿಯಾದ ಕುರುಬ ಸಮಾಜದ ಪೂಜಾರಿ ಪರಿವಾರದ ಮದುವೆ ಸಮಾರಂಭದಲ್ಲಿ ತೆಗೆದಿರುವ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಇಂದು ವಿಶ್ವ ಕುಟುಂಬ ದಿನಾಚರಣೆ ಹಿನ್ನೆಲೆ
  • ಒಂದೇ ಮನೆಯಲ್ಲಿ 84 ಜನರು ವಾಸ
  • ಮಾದರಿ ಸಹಬಾಳ್ವೆಗೆ ಹೆಸರುವಾಸಿ
ಬಸಯ್ಯ ವಸ್ತ್ರದ ರಬಕವಿ/ಬನಹಟ್ಟಿ
ನಮ್ಮ ಸನಾತನ ಸಂಪ್ರದಾಯ `ಕೂಡಿ ಬಾಳುವುದೇ ಸ್ವರ್ಗ ಸುಖ' ಎಂಬುದಕ್ಕೆ ಆದ್ಯತೆ ನೀಡಿದೆ. ಕುಟುಂಬದ ಪರಿಕಲ್ಪನೆಯೂ ವಿಶಾಲವಾಗಿದೆ. ಇಡೀ ವಿಶ್ವವನ್ನೇ `ವಸುದೈವ ಕುಟುಂಬಕಂ' ಎಂದೂ ಹೇಳಿಕೆ. ಆದರೆ ಇಂತಹ ಕೂಡು ಕುಟುಂಬಗಳು ಇತ್ತೀಚಿನ ದಿನಮಾನಗಳಲ್ಲಿ ವಿಘಟನೆಗೊಂಡು ಅವಿಭಕ್ತ ಕುಟುಂಬಗಳು ನೋಡಲು ಸಿಗುವುದೇ ಅಪರೂಪ.
ಇದಕ್ಕೆ ಅಪವಾದ ಎಂಬಂತೆ ರಬಕವಿಯ ಬ್ರಹ್ಮಾನಂದ ನಗರದಲ್ಲಿರುವ ಕುರುಬ ಸಮುದಾಯದ ಪೂಜಾರಿ ಪರಿವಾರ ಈಗಲೂ ಒಂದೇ ಕುಟುಂಬವಾಗಿ 84 ಜನರು ಸಹಬಾಳ್ವೆ ಮಾಡುತ್ತಿದ್ದು, ಮನೆಯಲ್ಲಿ ನಿರಂತರ 44 ಜನರು ಇರುತ್ತಾರೆ. ಉಳಿದವರು ಕೆಲಸದ ಮೇಲೆ, ಓದಲು, ಹೋಗಿದ್ದಾರೆ. ಒಂಬತ್ತು ಜನ ಸಹೋದರರು, ಅವರ ಪತ್ನಿಯರು, 19 ಮೊಮ್ಮಕ್ಕಳು ಎಲ್ಲರೂ ಸೇರಿ 84 ಜನರಿದ್ದಾರೆ.

ಸಹಕಾರವೇ ಮೂಲಮಂತ್ರ

ಮನೆಯ ಹಿರಿಯರಾದ ಪ್ರಭು ಪೂಜಾರಿ ಮನೆತನದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಎಲ್ಲರ ಸಹಕಾರದಿಂದ ಕುಟುಂಬದಲ್ಲಿ ಸೌಹಾರ್ದಯುತ ಬಾಳ್ವೆ ಮಾಡುತ್ತಿದ್ದಾರೆ. ಮನೆಯಲ್ಲಿಯೇ ಮೂವರು ಪೊಲೀಸ್ ಇಲಾಖೆಯಲ್ಲಿದ್ದರೆ, ಇಬ್ಬರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ವ್ಯಾಪಾರದಲ್ಲಿ ತೊಡಗಿಕೊಂಡರೆ, ಹಲವರು ಕುಟುಂಬಕ್ಕೆ ಸೇರಿದ 17 ಎಕರೆ ಜಮೀನಿನಲ್ಲಿ ಒಕ್ಕಲುತನ ನೋಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಕಬ್ಬು, ಗೋವಿನಜೋಳ, ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. ಜೊತೆಗೆ ಎಮ್ಮೆ, ಆಕಳು, ಆಡು, ಕೋಳಿ ಎಲ್ಲವನ್ನೂ ಸಾಕಿದ್ದಾರೆ. ಒಂದು ಜೆಸಿಬಿ, ಮೂರು ಟ್ರ‍್ಯಾಕ್ಟರ್, ಒಂದು ಕಾರು, ಹನ್ನೆರಡು ದ್ವಿಚಕ್ರವಾಹನಗಳು ಎಲ್ಲವೂ ಇವೆ.

ನಿತ್ಯ ದಾಸೋಹ

ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಯೋಜನಾಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ನಿತ್ಯ ಕನಿಷ್ಠ 12 ಕೆಜಿ ಜೋಳದ ಹಿಟ್ಟು, 8 ಕೆಜೆ ಅಕ್ಕಿ ಸೇರಿ ಇತರೇ ಪರಿಕರಗಳು ಕೇಜಿಗಟ್ಟಲೇ ತರಕಾರಿ ಬಳಕೆಯಾಗುತ್ತಿದೆ. ಇದರ ಜೊತೆಗೆ ಮನೆಗೆ ಆಗಮಿಸುವ ಅತಿಥಿಗಳನ್ನೂ ಅಷ್ಟೇ ಗೌರವದಿಂದ ನೋಡಿಕೊಳ್ಳಲಾಗುತ್ತದೆ. ಅಡುಗೆ ಮನೆ ಬೆಳಗ್ಗೆ 8ಕ್ಕೆ ಆರಂಭವಾದರೆ ನಿರಂತರವಾಗಿ ರಾತ್ರಿ 9ರವರೆಗೂ ಏನಾದರೊಂದು ಸಿದ್ಧವಾಗುತ್ತಿರುತ್ತದೆ ಎನ್ನುತ್ತಾರೆ ಪ್ರಭುಪೂಜಾರಿ.

ಮನೆಯಲ್ಲೇ ಅಂಗನವಾಡಿ

ನಮ್ಮ ಮನೆಯಲ್ಲಿರುವ ಸರಿಸುಮಾರು ಮೊಮ್ಮಕ್ಕಳೆಲ್ಲ ಸೇರಿದರೆ ಒಂದು ಅಂಗನವಾಡಿ ಕೇಂದ್ರವಾದಂತೆ ಭಾಸವಾಗುತ್ತದೆ. ಇದರೊಂದಿಗೆ ಶಾಲೆಗೆ, ಕಾಲೇಜಿನಲ್ಲಿ ಕಲಿಯುವವರು ಬೇರೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ಕುಟುಂಬದಲ್ಲಿ ನೀಡಲಾಗುತ್ತಿದೆ. ಎಲ್ಲರೂ ಕೂಡಿ ಇರುವುದರಿಂದ ನಮ್ಮ ನಡುವೆ ಸಂತಸ, ಸಂಭ್ರಮದಿಂದ ಜೀವನ ಸಾರ್ಥಕವೆನಿಸಿದೆ ಎಂಬುದು ಮನೆಯ ಸದಸ್ಯರ ಮಾತು.
"

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಸಂತೋಷದಿಂದ ಬಾಳುತ್ತಿದ್ದೇವೆ. ಅಲ್ಲದೇ ಮನೆಯ ಮಹಿಳೆಯರೂ ಮನೆಯ ದಿನನಿತ್ಯದ ಕೆಲಸವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಸಹಕರಿಸುತ್ತಾ, ಪ್ರೀತಿಯಿಂದ ಹಂಚಿಕೊಂಡು ಮಾಡುತ್ತಾರೆ.

— | ಪ್ರಭು ಪೂಜಾರಿ, ಮನೆಯ ಹಿರಿಯರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net