ನಕ್ಕು ನಗಿಸುವ ಹೆಣದ ಸೋಗಿನ ಬಂಡಿ..!!

ಗುಳೇದಗುಡ್ಡದಲ್ಲಿ ನಡೆಯುವ ಹೆಣೆದ ಸೋಗಿನ ಬಂಡಿ
ಗುಳೇದಗುಡ್ಡದಲ್ಲಿ ನಡೆಯುವ ಹೆಣೆದ ಸೋಗಿನ ಬಂಡಿ
Published on

ಪ್ರಮುಖ ಮುಖ್ಯಾಂಶಗಳು

  • ಗುಳೇದಗುಡ್ಡದಲ್ಲಿ ಹೋಳಿ ಹಬ್ಬದ ವಿಶೇಷ
  • ರಂಗು ಹೆಚ್ಚಿಸುವ ಶವಯಾತ್ರೆ
ಗುಳೇದಗುಡ್ಡ: ರೇಷ್ಮೆ ಖಣದ ನಗರ ಗುಳೇದಗುಡ್ಡದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಹೆಣದ ಸೋಗಿನ ಮೆರವಣಿಗೆ ಅತ್ಯಂತ ವಿಶೇಷತೆ ಪಡೆದಿದೆ. ಎಷ್ಟೇ ಪ್ರಯತ್ನ ಮಾಡಿದರೂ ಶವ ಪಾತ್ರದಾರಿ ನಗುವುದಿಲ್ಲ.
ಕಾಮ ದಹನವಾದ ಬಳಿಕ ಮರುದಿನ ಬೆಳಗ್ಗೆ ರಂಗೀನಾಟ ವೈಭವದಿಂದ ನಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ಸೋಗಿನ ಬಂಡಿಯ ಮೆರವಣಿಗೆ ಆರಂಭಗೊಳ್ಳುತ್ತದೆ. ರಾತ್ರಿವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಸೋಗಿನ ಮೆರವಣಿಗೆ ಆಕರ್ಷಕವಾಗಿರುತ್ತದೆ.
ಇಲ್ಲಿಯ ವಿಶೇಷತೆ ಏನು?
ಬಣ್ಣದಾಟ ಮುಗಿಯುತ್ತಿದ್ದಂತೆ ಟ್ರ‍್ಯಾಕ್ಟರ್‌ಗಳಲ್ಲಿ ಸೋಗಿನ ಅಲಂಕಾರ ಮಾಡಲಾಗುತ್ತದೆ. ಪುರುಷರು ಸ್ತ್ರೀ ವೇಷಧಾರಿಗಳಾಗುತ್ತಾರೆ. ಪುರುಷ - ಸ್ತ್ರೀ ಶವವಾಗಿ ಪುರುಷರೇ ಪಾತ್ರ ಮಾಡುತ್ತಾರೆ. ಸುತ್ತಲು ಸ್ತ್ರೀ ವೇಷಧಾರಿಗಳಾಗಿ ಪುರುಷರು ಕುಳಿತುಕೊಳ್ಳುತ್ತಾರೆ. ಬಳಿಕ ಮೆರವಣಿಗೆ ಶುರುವಾಗುತ್ತದೆ. ಶವದ ಮುಂದೆ ಬಿಕ್ಕಳಿಸುವುದು, ಕಣ್ಣೀರು ಹಾಕುತ್ತಾ ರೋದನೆ ಮಾಡುವುದು ಸೇರಿ ನಾನಾ ದೃಶ್ಯಗಳನ್ನು ಸೃಷ್ಟಿ ಮಾಡುತ್ತಾರೆ. ಆದರೂ ಸಹ ಶವ ಪಾತ್ರದಾರಿಯೂ ತುಟಿಕ್‌ಪಿಟಿಕ್ ಎನ್ನುವುದಿಲ್ಲ. ಇದೇ ಇಲ್ಲಿನ ವಿಶೇಷ. ಅವರು ಆಡುವ ಮಾತುಗಳು ನೋಡುಗರನ್ನು ನಕ್ಕು ನಗಿಸುತ್ತದೆ.
ಪಟ್ಟಣದ ನಗ್ಲಿ ಪೇಟೆ, ಗಚ್ಚಿನಕಟ್ಟಿ, ಕಂಠಿ ಪೇಟೆ, ಸಾಲೇಶ್ವರ ಪೇಟೆ, ರಜಂಗಳ ಪೇಟೆ, ಹರದೊಳ್ಳಿಯಲ್ಲಿನ ವಿವಿಧ ಮ್ಯಾಳಗಳು ಹೋಳಿ ಹಬ್ಬದ ಸಂದರ್ಭದಲ್ಲಿ ಹೆಣದ ಸೋಗು ಹಾಕುವುದು ವಾಡಿಕೆ. ಜನಪದ ಸಂಸ್ಕೃತಿಯ ಭಾಗವಾಗಿರುವ ಇವುಗಳನ್ನು ಇಂದಿಗೂ ಪಟ್ಟಣದಲ್ಲಿ ಉಳಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವು ಈ ರೀತಿಯ 5-6 ಸೋಗಿನ ಬಂಡಿಗಳು ಕಂಡು ಬರುತ್ತವೆ. ಈ ಮೆರವಣಿಗೆ ನೋಡಲು ಜನಸ್ತೋಮವೇ ಕಾದು ಕುಳಿತುಕೊಳ್ಳುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net