150 ರಿಂದ 200 ಎಕರೆ ಕಬ್ಬಿಗೆ ಬೆಂಕಿ

ಮುಧೋಳ ತಾಲೂಕಿನ ರೋಗಿ ಗ್ರಾಮ ವ್ಯಾಪ್ತಿಗೆ ಬರುವ ಕಬ್ಬಿನ ಹೊಲಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ 150 ರಿಂದ 200 ಎಕರೆ ಕಬ್ಬು ಸುಟ್ಟಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮುಧೋಳ ತಾಲೂಕಿನ ರೋಗಿ ಗ್ರಾಮ ವ್ಯಾಪ್ತಿಗೆ ಬರುವ ಕಬ್ಬಿನ ಹೊಲಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ 150 ರಿಂದ 200 ಎಕರೆ ಕಬ್ಬು ಸುಟ್ಟಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ
  • ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
  • ಕಟಾವಿಗೆ ಬಂದಿದ್ದ ಕಬ್ಬಿನ ಹೊಲಗಳಿಗೆ ಬೆಂಕಿ
ಬಾಗಲಕೋಟೆ: ಮುಧೋಳ ತಾಲೂಕಿನ ರೂಗಿ ಗ್ರಾಮ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಹೊಲಗಳಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಕಬ್ಬು ಹಾಳಾಗಿರುವ ಘಟನೆ ಸೋಮವಾರ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡು ಅಂದಾಜು 150 ರಿಂದ 200 ಎಕರೆಯಷ್ಟು ಬೆಳೆದು ನಿಂತಿದ್ದ ಕಬ್ಬು ಬೆಳೆ ಬೆಂಕಿಗೆ ಸಿಲುಕಿದೆ. ಸ್ಥಳೀಯ ರೈತರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ, ಸಮೀಪದ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಮೂರು ಗಂಟೆಗೂ ಹೆಚ್ಚು ಸಮಯ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಇನ್ನೇನು ಕಟಾವು ಮಾಡಿ ಕಾರ್ಖಾನೆಗೆ ಹೋಗಬೇಕಿದ್ದ ಕಬ್ಬು ಈ ರೀತಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾಳಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಹೊಲದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ಮಾರ್ಗದ ವೈರ್‌ಗಳು ಕೆಳಗೆ ಜೋತು ಬಿದ್ದಿವೆ. ಕಬ್ಬು ಎತ್ತರವಾಗಿ ಬೆಳೆದಿರುವುದರಿಂದ ಒಂದಕ್ಕೊಂದು ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿ ಇದೆ.
ಒಬ್ಬರ ಹೊಲಕ್ಕೆ ಹೊತ್ತಿಕೊಂಡ ಬೆಂಕಿಯು ಕೆಲವೇ ಕ್ಷಣಗಳಲ್ಲಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹತ್ತಿಕೊಳ್ಳುತ್ತಾ ಸಾಗಿದೆ. ಕಟಾವಿಗೆ ಬಂದಿರುವುದರಿಂದ ರವದಿಯ ಪ್ರಮಾಣ ಜಾಸ್ತಿ ಇತ್ತು. ಇದರಿಂದಾಗಿ ಬೆಂಕಿ ಹರಡುವಿಕೆ ತೀವ್ರವಾಗಿತ್ತು.
ಆನಂದ (ಅನೀಲ) ಚವಾಣ, ಗದಿಗೆಪ್ಪ ಡಂಗಿ, ಸಂಗಪ್ಪ ಮುಗತಿ, ಪ್ರತಾಪ ಚಂದನಶಿವ, ರಾಜೇಂದ್ರ ಚಂದನಶಿವ, ಶಿವಾಜಿ ಚಂದನಶಿವ, ಪೃಥ್ವಿರಾಜ ಚಂದನಶಿವ, ಬಸವರಾಜ ಗೋಸಾರ, ಸುರೇಶ ಹಿಪ್ಪರಗಿ, ಆನಂದ ಬೋಯಿ, ದಶರಥ ಚವಾಣ, ವಿಜಯ ಚವಾಣ, ರಾಜು ನದ್ಾ ಮುಂತಾದ 25ಕ್ಕೂ ಹೆಚ್ಚು ರೈತರು ಜಮೀನುಗಳಿಗೆ ಬೆಂಕಿ ತಗುಲಿದೆ.
ಘಟನೆ ಬಗ್ಗೆ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ವಿಷಾದ ವ್ಯಕ್ತಪಡಿಸಿದ್ದು, ಕೂಡಲೇ ಕಬ್ಬು ಕ್ರಷಿಂಗ್ ಮಾಡಿಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ನಿರ್ದೇಶನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಬ್ಬಿಗೆ ಹಾನಿ ಪ್ರಮಾಣವನ್ನು ವೀಕ್ಷಿಸಿದರು. ಹೆಸ್ಕಾಂ ಮತ್ತು ಕೃಷಿ ಅಧಿಕಾರಿಗಳು ಸರ್ವೆ ಮಾಡಿ ಹಾನಿಯ ಪ್ರಮಾಣ ಹಾಗೂ ಘಟನೆಗೆ ನಿಖರ ಕಾರಣ ಪತ್ತೆ ಮಾಡಿ ವರದಿ ನೀಡುವಂತೆ ಸೂಚಿಸಿದರು.
ಕಬ್ಬು ಸುಟ್ಟಿರುವ ಕಾರಣ ಸುತ್ತಮುತ್ತ ಇರುವ ಐಸಿಪಿಎಲ್, ನಿರಾಣಿ, ಸಮೀರವಾಡಿ, ರನ್ನ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯವರು ಮಾನವೀಯತೆ ದೃಷ್ಟಿಯಿಂದ ಕಾರ್ಖಾನೆಗಳಿಂದ 50 ರಿಂದ 60 ಗ್ಯಾಂಗ್ ಕಳುಹಿಸಿ, ತ್ವರಿತವಾಗಿ ಕಬ್ಬು ಕಟಾವು ಮಾಡಿಸಿ, ಕ್ರಷಿಂಗ್ ಮಾಡುವಂತೆ ಜಿಲ್ಲಾಧಿಕಾರಿ ಸಂಗಪ್ಪ ನಿರ್ದೇಶನ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net