12 ಕೋಟಿಯ ಹೈಟೆಕ್ ಶಾಲೆ ಲೋಕಾರ್ಪಣೆಗೆ ಸಜ್ಜು

ಮುಧೋಳ ಮಲ್ಲಮ್ಮ ನಗರದ ವೇಮನ ಅಕಾಡೆಮಿಯ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವೇಮನ ಅಕಾಡೆಮಿ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿದರು. ಉದಯ ಸಾರವಾಡ, ಶ್ರೀಕಾಂತ ಗುಜ್ಜನವರ ಇತರರಿದ್ದರು.
ಮುಧೋಳ ಮಲ್ಲಮ್ಮ ನಗರದ ವೇಮನ ಅಕಾಡೆಮಿಯ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವೇಮನ ಅಕಾಡೆಮಿ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿದರು. ಉದಯ ಸಾರವಾಡ, ಶ್ರೀಕಾಂತ ಗುಜ್ಜನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಯಾನಂದ ಎಸ್. ಪಾಟೀಲ ಹೇಳಿಕೆ
  • ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಮುಧೋಳ: ನಗರದ ಹೆಸರಾಂತ ಭಕ್ತಿ ಶಿರೋಮಣಿ ಕರ್ಮಯೋಗಿ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದು, 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 21ನೇ ಶತಮಾನದ ಮಾದರಿ ಶಾಲೆಯು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ದಯಾನಂದ ಎಸ್. ಪಾಟೀಲ ಹೇಳಿದರು.
ನಗರದ ವೇಮನ ಅಕಾಡೆಮಿಯ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇಮನ ಅಕಾಡೆಮಿ ಕೇವಲ ಅಕ್ಷರ ಅಭ್ಯಾಸಕ್ಕೆ ಸೀಮಿತವಾಗದೆ, ಮೌಲ್ಯಯುತ ಹಾಗೂ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಈ ಶೈಕ್ಷಣಿಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಂದಾಜು 6.17 ಎಕರೆ ವಿಸ್ತೀರ್ಣದ ಕ್ಷೇತ್ರದಲ್ಲಿ 72,000 ಚದರ ಅಡಿ ವಿಸ್ತೀರ್ಣದ ಭವ್ಯ ಕಟ್ಟಡ ನಿರ್ಮಾಣವಾಗಿದ್ದು, ಒಟ್ಟು 76 ವಿಶಾಲವಾದ ಕೊಠಡಿ ಈ ಶಾಲೆ ಹೊಂದಿದೆ ಎಂದರು.
ನಿರ್ದೇಶಕ ರಡ್ಡಿ ಪಾಟೀಲ ಮಾತನಾಡಿ, 1972ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ದಾನಿಗಳ ಉದಾರತೆಯಿಂದ ಈ ಮಟ್ಟಕ್ಕೆ ಬೆಳೆದಿದೆ. ಶಾಲಾ ಕಟ್ಟಡಕ್ಕಾಗಿ ಅಂದಾಜು 92 ಸದಸ್ಯರು ತಲಾ 8 ಲಕ್ಷ ರೂ. ಹಾಗೂ 220 ಸದಸ್ಯರು ತಲಾ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದಾನಿಗಳ ಈ ಮಹತ್ಕಾರ್ಯದಿಂದಾಗಿ ಇಂದು ಸ್ಥಳೀಯವಾಗಿಯೇ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸೌಲಭ್ಯ ನೀಡಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ನಿರ್ದೇಶಕ ಶ್ರೀಕಾಂತ ಗುಜ್ಜನವರ ಮಾತನಾಡಿ, ಪ್ರತಿಯೊಂದು ತರಗತಿಯಲ್ಲಿ ಡಿಜಿಟಲ್‌ ಸಂವಾದಾತ್ಮಕ ಫಲಕಗಳನ್ನು ಅಳವಡಿಸಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಹಾಗೂ ಗಣಿತ ವಿಷಯಗಳಿಗೆ ಪ್ರತ್ಯೇಕ ಸುಸಜ್ಜಿತ ಪ್ರಯೋಗಾಲಯಗಳು, ಗಣಕೀಕೃತ ಗ್ರಂಥಾಲಯ ಹಾಗೂ ಆಂತರಿಕ-ಹೊರಾಂಗಣ ಕ್ರೀಡಾಂಗಣಗಳ ವ್ಯವಸ್ಥೆ ಇಲ್ಲಿದೆ. ಕೇವಲ ಪಠ್ಯವಲ್ಲದೆ ಕ್ರೀಡೆ, ನೃತ್ಯ, ನೈತಿಕ ಶಿಕ್ಷಣ ಹಾಗೂ ಕೈಬರಹ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪ್ರಾಚಾರ್ಯ ನೀಲಕಂಠೇಶ್ವರಿ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ಇಲ್ಲಿನ ಪಾಲಕರು ಮಕ್ಕಳನ್ನು ಮಂಗಳೂರು, ಹುಬ್ಬಳ್ಳಿ, ಧಾರವಾಡದಂತಹ ನಗರಗಳಿಗೆ ಕಳುಹಿಸಿ ಆರ್ಥಿಕ ಹೊರೆ ಅನುಭವಿಸುತ್ತಿದ್ದರು. ಅದನ್ನು ತಪ್ಪಿಸಿ ಸ್ಥಳೀಯವಾಗಿಯೇ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿ. ತಾಲೂಕಿನ ಪ್ರತಿ ಗ್ರಾಮದಿಂದಲೂ ವಿದ್ಯಾರ್ಥಿಗಳಿಗಾಗಿ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಪ್ರವೇಶಾತಿ ಸಮಯದಲ್ಲಿ ವಿದ್ಯಾರ್ಥಿ ಮತ್ತು ಪಾಲಕರೊಂದಿಗೆ ಮುಕ್ತ ಸಂವಾದ ನಡೆಸಿ ಮಗುವಿನ ಆಸಕ್ತಿ ಗುರುತಿಸಿ ಭವಿಷ್ಯದ ಮಾರ್ಗದರ್ಶನ ನೀಡಲಾಗುವುದು ಎಂದು ವಿವರಿಸಿದರು.
ಸಂಸ್ಥೆಯ ಕಾರ್ಯದರ್ಶಿ ವಿಠ್ಠಲ ದ್ಯಾವಪ್ಪ ನಾಗನೂರ, ಸದಸ್ಯರಾದ ಅಶೋಕ ಪಾಟೀಲ ಉದಯ ಸಾರವಾಡ, ಕೆ.ಆರ್. ಮಾಚಪ್ಪನವರ, ಲಕ್ಷ್ಮಣ ತಳೆವಾಡ, ಮಹಾದೇವ ದಾಸರಡ್ಡಿ, ನಾಮದೇವ ತುಳಸಿಗೇರಿ, ರಾಮಕೃಷ್ಣ, ಸತೀಶ ಮಾಲಘಾಣ, ಶಿವನಗೌಡ ನಾಡಗೌಡ, ಶ್ರೀನಿವಾಸ ಹನುಮಂತ ಬಿರಾದಾರ ಪಾಟೀಲ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net