ಸರ್ಕಾರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ

 ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಸೋಮವಾರ ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕಿನ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿ.ಪಂ. ಸಿಇಒ ಶಶಿಧರ ಕುರೇರ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಆರ್‌ಬಿಐ ಬ್ಯಾಂಕ್ ಪ್ರತಿನಿಧಿ ವಿಜಯಶ್ರೀ, ನಬಾರ್ಡ್ ಮಂಜುನಾಥ ರೆಡ್ಡಿ ಇದ್ದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಸೋಮವಾರ ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕಿನ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿ.ಪಂ. ಸಿಇಒ ಶಶಿಧರ ಕುರೇರ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಆರ್‌ಬಿಐ ಬ್ಯಾಂಕ್ ಪ್ರತಿನಿಧಿ ವಿಜಯಶ್ರೀ, ನಬಾರ್ಡ್ ಮಂಜುನಾಥ ರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಗದ್ದಿಗೌಡರ ಸಲಹೆ
  • ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ
  • ಸರ್ಕಾರದ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ ಅವುಗಳನ್ನು ಅನುಷ್ಠಾನಗೊಳಿಸುವುದು ಕೂಡ ಮುಖ್ಯವಾಗಿರುತ್ತದೆ.
ಬಾಗಲಕೋಟೆ: ಸರ್ಕಾರಿ ಇಲಾಖೆಗಳೊಂದಿಗೆ ಬ್ಯಾಂಕ್‌ಗಳು ಸಮನ್ವಯ, ಸಹಕಾರ ನೀಡಿದಾಗ ಮಾತ್ರ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಅವರು ಬ್ಯಾಂಕುಗಳ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್‌ನ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ ಅವುಗಳನ್ನು ಅನುಷ್ಠಾನಗೊಳಿಸುವುದು ಕೂಡ ಮುಖ್ಯವಾಗಿರುತ್ತದೆ. ಲಾನುಭವಿಗಳನ್ನು ಅನಗತ್ಯವಾಗಿ ಅಲೆದಾಡಿಸುವ ಪದ್ಧತಿ ಬಿಟ್ಟು, ಪ್ರಾಥಮಿಕ ಹಂತದಲ್ಲೇ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಬ್ಯಾಂಕ್ ಅಧಿಕಾರಿಗಳು ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಸರ್ಕಾರದ ವಿವಿಧ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಲಾನುಭವಿಗಳಿಗೆ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಬೇಕು. ಯೋಜನೆಗಳ ಕುರಿತು ಜನರಲ್ಲಿ ಜಾಗತಿ ಮೂಡಿಸಬೇಕು, ಜನರಿಗೆ ತೊಂದರೆ ಕೊಡದೆ, ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಬೇಕು. ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಲಕಗಳಲ್ಲಿ ಪ್ರದರ್ಶಿಸಿ, ತಾಂತ್ರಿಕ ತೊಂದರೆಗಳಿದ್ದಲ್ಲಿ ತಿಳಿಸಿ, ಅವಶ್ಯಕತೆ ಇರುವವರಿಗೆ ಆದ್ಯತೆ ಮೇರೆಗೆ ಸಾಲ ಸೌಲಭ್ಯ ಒದಗಿಸಬೇಕು. ಒಟ್ಟಾರೆಯಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದರು.
ಇಲಾಖೆ ಅಧಿಕಾರಿಗಳು ಬ್ಯಾಂಕ್‌ಗಳಿಗೆ ತೆರಳಿ ಆಸಕ್ತಿವಹಿಸಿ ವಿವಿಧ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ದೊರಕಿಸಿಕೊಡಿ, ಸಣ್ಣಪುಟ್ಟ ಕಾರಣಕ್ಕೆ ತಡೆ ಹಿಡಿಸುವ ಕೆಲಸ ಮಾಡಬೇಡಿ ಎಂದು ಅಂಬೇಡ್ಕರ್ ನಿಗಮ ಸೇರಿ ವಿವಿಧ ನಿಗಮಗಳ ಅಧಿಕಾರಿಗಳನ್ನು ಎಚ್ಚರಿಸಿದರು.
ಇಂದಿನ ದಿನಮಾನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿರುವುದರಿಂದ ಯುವ ಸಮೂಹವನ್ನು ಸ್ವಯಂ ಉದ್ಯೋಗಕ್ಕೆ ಉತ್ತೇಜಿಸಬೇಕಾಗಿದೆ. ರೈತರೇ ಆಸಕ್ತಿ ಕಳೆದುಕೊಳ್ಳುತ್ತಿರುವುದರಿಂದ ಯುವಕರು ಕೃಷಿಗಿಂತ ಇತರೇ ಉದ್ಯಮಗಳತ್ತ ಒಲವು ತೋರುತ್ತಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳ ಬಗ್ಗೆ ಪ್ರಚಾರಪಡಿಸಿ ಸೂಕ್ತ ಮಾರ್ಗದರ್ಶನ ನೀಡಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿ ಯುವಕರು ನವ ಉದ್ಯಮಿಗಳಾಗಲು ಪ್ರೇರೇಪಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಲಾನುಭವಿಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು, ಈ ಬಗ್ಗೆ ಆಯಾ ಬ್ಯಾಂಕ್ ವ್ಯವಸ್ಥಾಪಕರು ಗಮನಹರಿಸಬೇಕು. ಯಾವ ಬ್ಯಾಂಕಿನಲ್ಲಿ ಅರ್ಜಿಗಳು ಬಾಕಿ ಉಳಿದಿವೆಯೋ ಅವೆಲ್ಲವೂ ಮುಂದಿನ ಹದಿನೈದು ದಿನದೊಳಗಾಗಿ ವಿಲೇವಾರಿ ಮಾಡಬೇಕು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಬಾಗಲಕೋಟೆ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಆರ್‌ಬಿಐ ಬ್ಯಾಂಕ್ ಅಧಿಕಾರಿ ವಿಜಯಶ್ರೀ, ನಬಾರ್ಡ್ ಡಿಡಿಎಂ ಮಂಜುನಾಥ ರೆಡ್ಡಿ ಎಸ್., ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net