ಸ್ಫೂರ್ತಿಯುತ ಸಾಧನೆ ಮಾಡಿ

BKT NEWS 8-3
Published on

ಬಾಗಲಕೋಟೆ: ಮಹಿಳೆಯರು ದುರ್ಬಲರು, ಅಬಲೆಯರು ಎಂಬ ಕಾಲ ಇದಲ್ಲ. ಪ್ರಸ್ತುತವಾಗಿ ಪುರುಷರಿಗೆ ಸಮನಾಗಿ ಮಹಿಳೆಯರು ಬೆಳೆಯುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.

ಜಿಲ್ಲಾಡಳಿತ ಭವನದ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೀ ಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸಮಾಜ ಹಾಗೂ ಕುಟುಂಬಗಳಲ್ಲಿ ಹೆಣ್ಣಿಗೆ ಗೌರವ ಸಿಗುತ್ತದೆಯೋ ಅಲ್ಲಿ ನೆಮ್ಮದಿ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಮಹಿಳೆಯರಲ್ಲಿದೆ. ಇಂದು ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ತಾವು ಬೆಳೆಯುವ ಮೂಲಕ ಇತರರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರ್ಕಾರ ಮಹಿಳೆ, ಪುರಷರೆನ್ನದೆ ಸಮಾನ ಅವಕಾಶ ಕಲ್ಪಿಸಿದ್ದು, ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ, ಮಹಿಳೆಯರಿಗೆ ನೀಡಿರುವ ಸಮಾನತೆ, ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆ ಸಂಕೋಚ ಮನೋಭಾವನೆ ಹೊಂದಿದ್ದು, ಅದರಿಂದ ಹೊರಬರಲು ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.

ಇಳಕಲ್ಲಿನ ಸಹ ಪ್ರಾಧ್ಯಾಪಕಿ ಸುಮಂಗಲಾ ಮೇಟಿ ಮಾತನಾಡಿ, ಪುರುಷರಲ್ಲಿ ಅಂತಕರಣದ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಮಾಡಬೇಕಿದೆ. ಇಂದಿನ ಮಹಿಳೆಯರು ಶಿಕ್ಷಣವಂತರಾಗುವ ಮೂಲಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಇನ್ನಷ್ಟು ಶಿಕ್ಷಣದ ಅರಿವು ಮೂಡಿಸಬೇಕಿದೆ. ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳಿಗೆ ಕೊನೆ ಹಾಡಬೇಕಿದೆ ಎಂದರು.

ನ್ಯಾಯವಾದಿ ಮಳಿಯಮ್ಮ ಕೆಂಚನ್ನವರ ಮಹಿಳೆ ಮತ್ತು ಕಾನೂನು, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಹಾಗೂ ಮಹಿಳೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಜಾನಪದ ಕಲಾವಿದೆ ಗೌರಮ್ಮ ಸಂಕಿನ ಸೇರಿ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಸ್ವಾಗತಿಸಿದರು.

ಮಹಿಳೆಯರಿಗೆ ಪುರಸ್ಕಾರ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾಶಿಬಾಯಿ ಭೂತಪ್ಪಗೋಳ (ಜಾನಪದ), ಅನುಸೂಯಾ ಕಾಖಂಡಕಿ (ಕೃಷಿ), ಸರೋಜಾ ಹಾದಿಮನಿ (ಸಾಮಾಜಿಕ), ಯಲ್ಲವ್ವ ರೊಡ್ಡಪ್ಪನ್ನವರ (ಜಾನಪದ), ಪ್ರಾಚಿ ಜಿಂಗಾಡಿ (ಸ್ವಯಂ ಉದ್ಯೋಗ), ಪೂಜಾ ಜಿಂಗಾಡಿ (ಸ್ವಯಂ ಉದ್ಯೋಗ), ಪರಿಮಳಾ ಮನಗೂಳಿ (ಪತ್ರಿಕೋದ್ಯಮ), ಅನಿತಾ ಪಾಟೀಲ, (ಕೃಷಿ), ಸುನೀತಾ ಮೇಟಿ (ಜಾನಪದ ಸಾಹಿತ್ಯ), ಸಿಸ್ಟರ್ ಸಿಂತಿಯಾ ಸಿಕ್ವೇರಾ (ಸಾಮಾಜಿಕ ಸೇವೆ), ಅರ್ಚನಾ ದಡ್ಡೇನ್ನವರ (ವೈದ್ಯಕೀಯ), ರೀಯಾನಾ ಮಕಾಂದರ, ವೀಣಾ (ಸ್ವಯಂ ಉದ್ಯೋಗ), ದಾನಮ್ಮ ಚಿಚಕಂಡಿ (ಸೈಕ್ಲಿಂಗ್), ಕವಿತಾ ಲಮಾಣಿ, ಹಾಸಿಂಬಿ ಕಾಲಿ (ಕ್ರೀಡೆ), ತಾಯಕ್ಕ ಮಾದರ (ಕನ್ನಡ ವ್ಯಾಸಂಗ), ಸವಿತಾ ನಲವಡೆ (ಸೇವೆ), ಲಕ್ಷ್ಮೀ ಗೌಡರ (ಸೇವೆ), ರೂಪಶ್ರೀ ಹಂಜನ್ (ಯೋಗ) ಪುರಸ್ಕರಿಸಲಾಯಿತು.

ಮಕ್ಕಳಿಗೆ ಸನ್ಮಾನ
ಆನಂದ ಜಗದಾಳ, ಪ್ರಗತಿ ಜರಾಳಿ, ವಾಜೀದ್ ಸುತ್ತಾರ (ಕ್ರೀಡೆ), ನಿತ್ಯಾ ಕುಲಕರ್ಣಿ, ಶ್ರೇಯಾ ಶಿರೂರ, ಶಾಲಿನಿ ಪವಾರ (ಶೈಕ್ಷಣಿಕ), ಅಭಿನವ ಕರಡಿ (ಸಾಂಸ್ಕೃತಿಕ-ಜಾನಪದ), ಶ್ರೇಯಾ ಕುಲಕರ್ಣಿ(ನೃತ್ಯ) ಅವರನ್ನು ಸನ್ಮಾನಿಸಲಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net