ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ

BKT NEWS 24-2
Published on

ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಯುವ ಮತದಾರರು ಬಿಟ್ಟು ಹೋಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆಯ ಜಿಲ್ಲಾ ವೀಕ್ಷಕ ಮನೋಜ್ ಜೈನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಮತದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಬೂತ್ ಮಟ್ಟದ ಬಿಎಲ್‌ಒಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಭೇಟಿ ನೀಡಿ, ಪರಿಶೀಲಿಸುವ ಕಾರ್ಯವಾಗಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಅಲೆಮಾರಿ ಜನಾಂಗ ಹಾಗೂ ಸುಡಗಾಡ ಸಿದ್ದರು ಬಿಟ್ಟು ಹೋಗಬಾರದು. ಎಲ್ಲ ತಹಸೀಲ್ದಾರರು ಚುರುಕಾಗಿ ಕಾರ್ಯನಿರ್ವಹಿಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮಿಂಚಿನ ನೋಂದಣಿಯಲ್ಲಿ 18-19 ವಯಸ್ಸಿನ 5640 ಮತದಾರರು ಹೆಸರು ನೋಂದಾಯಿಸಿದ್ದಾರೆ. ಕಳೆದ ಡಿ.16 ರಿಂದ ಜ.23 ರವರೆಗೆ ಜಿಲ್ಲೆಯಲ್ಲಿ ಒಟ್ಟು 31880 ಅರ್ಜಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈವರೆಗೆ 3204 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಹೊಸ ಗುರುತಿನ ಚೀಟಿಯ ಮತ ಚೀಟಿಗಳನ್ನು ಮತದಾರರಿಗೆ ನೀಡಲಾಗುತ್ತಿದ್ದು, ಈವರೆಗೆ 42246 ಹೊಸ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು.

ಜಿಲ್ಲೆಯ 7 ಮತ ಕ್ಷೇತ್ರಗಳಲ್ಲಿ ಜ.13ರ ಅಂತ್ಯಕ್ಕೆ ಹಕ್ಕು ಮತ್ತು ಆಕ್ಷೇಪಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6ಕ್ಕೆ ಸಂಬಂಧಿಸಿದಂತೆ 26671, ಹೆಸರು ತೆಗೆದು ಹಾಕಲು ನಮೂನೆ-7ಕ್ಕೆ 6489, ಲೋಪದೋಷ ಸರಿಪಡಿಸಲು ನಮೂನೆ-8ಕ್ಕೆ 21753 ಹಾಗೂ ಅದೇ ವಿಧಾನ ಸಭೆ ಕ್ಷೇತ್ರದ ಒಂದು ಮತಗಟ್ಟೆಯಿಂದ ಬೇರೊಂದು ಮತಗಟ್ಟೆಗೆ ಸ್ಥಳಾಂತರಕ್ಕೆ ನಮೂನೆ-8ಎಗೆ ಸಂಬಂಧಿಸಿದಂತೆ 3665 ಆಕ್ಷೇಪಣೆಯ ಅರ್ಜಿಗಳು ಬಂದಿವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪವ್ವಾರ ಸೇರಿ ಎಲ್ಲ ತಹಸೀಲ್ದಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net