ಪುಂಡಿಗಿಡಕ್ಕೆ ಭರ್ಜರಿ ಪೂಜೆ! ದುರ್ಗಾದೇವಿ ನೆಲೆಸಿದ್ದಾಳೆಂದು ವೀಕ್ಷಣೆಗೆ ಜನಸಾಗರ

Pundi gida
Published on

ಬಾಗಲಕೋಟೆ: ಬಾದಾಮಿ ತಾಲೂಕಿನ ಬೇಲೂರು- ಢಾಣಕಶಿರೂರ ಮಾರ್ಗಮಧ್ಯದ ಹೊಲವೊಂದರ ಪುಂಡಿ ಗಿಡದಲ್ಲಿ ಪ್ರಸಿದ್ಧ ಬೊಮ್ಮಸಾಗರದ ದುರ್ಗಾದೇವಿ ನೆಲೆಸಿದ್ದಾಳೆ ಎನ್ನುವ ಸುದ್ದಿ ಹರಡಿದ್ದು, ಜನ ಗುಂಪು ಗುಂಪಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.

ಅಂಕು ಡೊಂಕಾಗಿ ಇರುವ ಪುಂಡಿ ಗಿಡ ಸರ್ಪದ ರೂಪವಾಗಿದೆ. ಮೇಲ್ಭಾಗದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆಂದು ಜನರು ಹೇಳುತ್ತಿದ್ದಾರೆ. ಈ ಸುದ್ದಿ ಬಾಯಿಯಿಂದ ಬಾಯಿಗೆ ಹರಡಿ, ಇದೀಗ ಹತ್ತಾರು ಗ್ರಾಮಗಳಿಂದ ಜನರು ಗುಂಪು ಗುಂಪಾಗಿ ಆಗಮಿಸಲು ಆರಂಭಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಶ್ರದ್ಧಾಭಕ್ತಿಯಿಂದ ಪುಂಡಿಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಗಿಡದ ಬಳಿ ಕಾಣಿಕೆ ಇಟ್ಟು ಹೋಗುತ್ತಿದ್ದಾರೆ.

ಸುದ್ದಿ ಹಬ್ಬಿದ್ದೇಗೆ?: ಇತ್ತೀಚೆಗೆ ಮಹಿಳೆಯೊಬ್ಬರ ಮೈಯಲ್ಲಿ ದೇವಿ ಬಂದಿದ್ದಳಂತೆ. ಆಗ, ನಾನು ಬೊಮ್ಮಸಾಗರದ ದುರ್ಗಾದೇವಿ. ಜಮೀನಿನ ಪುಂಡಿಗಿಡದಲ್ಲಿ ನೆಲೆಸಿದ್ದೇನೆ. ನನ್ನ ಪೂಜಿಸಿ ಎಂದಿದ್ದರಂತೆ. ಇದೀಗ ಗಿಡಕ್ಕೆ ಹೂಮಾಲೆ ಹಾಕಿ, ಕುಂಕುಮ, ಭಂಡಾರ ಹಚ್ಚಿದ್ದಾರೆ.

ಗಿಡದ ಬುಡದಲ್ಲಿ ಕಲ್ಲು ಇಟ್ಟಿದ್ದು, ಅದಕ್ಕೆ ಪೂಜೆ ಆರಂಭವಾಗಿದೆ. ಮಣ್ಣಿನ ಗಡಿಗೆಯಲ್ಲಿ ನೀರು ತಂದು ಜೋಗಮ್ಮ ಇದ್ದವರು ಪೂಜೆ ಮಾಡುತ್ತಿದ್ದಾರೆ. ಭಕ್ತರ ಸಂಖ್ಯೆಯೂ ಹೆಚ್ಚುತ್ತಿದ್ದು, ಪುಂಡಿ ಗಿಡಕ್ಕೆ ಚಪ್ಪರ ಹಾಕಲು ಮುಂದಾಗಿದ್ದಾರೆ. ಸದ್ಯಕ್ಕೆ ಮೈಯಲ್ಲಿ ದೇವಿ ಬಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಮಹಿಳೆ ಯಾರು? ಜಮೀನು ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net