

ಬಾಗಲಕೋಟೆ: ಸರ್ಕಾರದ ಜಾಗ, ಚರಂಡಿಗಳ ಮೇಲೆ ಮನೆ, ಅಂಗಡಿ, ಶೆಡ್ ನಿರ್ಮಿಸಿಕೊಂಡಿದ್ದರಿಂದ ನೈರ್ಮಲ್ಯಕ್ಕೆ ಅಡ್ಡಿಯಾಗುತ್ತಿದೆ. ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದರಿಂದ ಒತ್ತುವರಿ ತೆರವುಗೊಳಿಸಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದರು.
ನಗರಸಭೆ ಆವರಣದಲ್ಲಿ ಗುರುವಾರ ಬಾಗಲಕೋಟೆ ನಗರಸಭೆ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಪರಿಹಾರಧನ ಪಡೆದು ನವನಗರದಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ಮುಳುಗಡೆ ಪ್ರದೇಶದಲ್ಲಿ ಶೆಡ್‌ನಲ್ಲಿ ಬದುಕು ಕಟ್ಟಿಕೊಂಡಿರುವುದು ಆರೋಗ್ಯಕರ ಲಕ್ಷಣವಲ್ಲ. ಇವುಗಳನ್ನು ತೆರವುಗೊಳಿಸಿ ಸುರಕ್ಷಿತ, ಆರೋಗ್ಯ ಪೂರ್ಣ ವಾತಾವರಣದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರು ಒತ್ತುವರಿ ತೆರವು ಮಾಡುವಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳು ಸರಿಯಾಗಿ ಮಾಹಿತಿ, ಮಾರ್ಗದರ್ಶನ ಮಾಡಬೇಕು. ಮೂರನೇ ಅಲೆ ಬರದಂತೆ ಜಾಗೃತಿ ವಹಿಸಬೇಕು. ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದು ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಹಳೆಯ ಬಾಗಲಕೋಟೆ ಮುಳುಗಡೆ ಪ್ರದೇಶವನ್ನು 1.80 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ. ಅಲ್ಲದೆ, ಈ ಪ್ರದೇಶದಲ್ಲಿ 25 ರಿಂದ 30 ಸಾವಿರ ಸಸಿಗಳನ್ನು ಹಚ್ಚಲಾಗುವುದು. ನೀರು ನಿಂತರು ಸಹ ಸಮಸ್ಯೆ ಉಂಟಾಗದಂತಹ ಸಸಿಗಳನ್ನು ನೆಡಲಾಗುವುದು. ನಗರದಲ್ಲಿ ವಾರ್ಡ್‌ವಾರು ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಾರಂಭಸಲಾಗುತ್ತಿದ್ದು, ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕಾರ್ಯ ನಡೆಯಲಿದ್ದು, ನಗರದ ಜನತೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿ ಧಾಮಜಿ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಅಶೋಕ ಲಿಂಬಾವಳಿ, ರಾಜು ರೇವಣಕರ, ರಾಜು ನಾಯ್ಕರ ಹಾಗೂ ಇತರರು ಉಪಸ್ಥಿತರಿದ್ದರು.
ನಗರದ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಬಾಗಲಕೋಟೆ ನಗರದಲ್ಲಿಯೂ ಸರ್ಕಾರಿ ಜಾಗ ಒತ್ತುವರಿಯಾಗಿರುವುದು ಕಂಡು ಬಂದಿದೆ. ಅಧಿಕಾರಿಗಳು ಇದನ್ನು ತೆರವುಗೊಳಿಸಲು ಮುಂದಾಗಬೇಕು.
- ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ