

ಬಾಗಲಕೋಟೆ: ಜಿಲ್ಲಾ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನ ಕಟ್ಟಡ ದುರಸ್ತಿ ಹಾಗೂ ನವೀಕರಣಕ್ಕೆ ಕೈಗೊಂಡ ಕಾಮಗಾರಿಗಳನ್ನು ಶಾಸಕ ವೀರಣ್ಣ ಚರಂತಿಮಠ ಸೋಮವಾರ ಪರಿಶೀಲನೆ ಮಾಡಿದರು.
ಜಿಲ್ಲಾಡಳಿತ ಭವನದಲ್ಲಿ ಕೈಗೊಂಡ ಪ್ರತಿಯೊಂದು ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲಾಡಳಿತ ಭವನದ ಗ್ರೌಂಡ್ ಫ್ಲೋರ್, ಮೊದಲನೇ ಹಾಗೂ ಎರಡನೇ ಮಹಡಿಯಲ್ಲಿ ನಡೆದ ಎಲ್ಲ ದುರಸ್ತಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಬಿರುಕು ಬಿಟ್ಟ ಗೋಡೆ, ಕಟ್ಟಡದ ಮೇಲ್ಛಾವಣಿ, ಶೌಚಗೃಹ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿ ನಿಧಾನಗತಿಯತ್ತ ಸಾಗಿರುವುದನ್ನು ಕಂಡ ಶಾಸಕರು ಕಾಮಗಾರಿ ಕೆಲಸ ಚುರುಕುಗೊಳಿಸಲು ಸೂಚಿಸಿದರು.
ಅಲ್ಲದೆ, ಕಚೇರಿಗಳಲ್ಲಿ ಎಲ್ಲೆಂದರಲ್ಲಿ ಕಡತಗಳನ್ನು ಬಿದ್ದಿರುವುದನ್ನು ಕಂಡು ಸಂಬಂಧಿಸಿದ ಅಧಿಕಾರಿಗಳಿಗೆ ವ್ಯವಸ್ಥಿತವಾಗಿ ಇಡಬೇಕು. ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಕಚೇರಿ ವಾತಾವರಣ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೊಠಡಿಗಳಲ್ಲಿ ಕೈಗೊಳ್ಳಬಹುದಾದ ಎಲ್ಲ ದುರಸ್ತಿಗಳನ್ನು ಮಾಡಿಸಿಕೊಳ್ಳಬೇಕು. ಜಿಲ್ಲಾಡಳಿತ ಭವನದ ಮೇಲ್ಛಾವಣಿಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ, ನೀರಿನ ಟ್ಯಾಂಕ್‌ನಿಂದ ನೀರು ಸೋರದಂತೆ ಮಾಡಬೇಕು. ಇಡೀ ಜಿಲ್ಲಾಡಳಿತ ಭವನ ಸುಂದರವಾಗಿ ಕಾಣುವಂತೆ ಮಾಡಬೇಕು. ವಿದ್ಯುತ್ ಹೊಸ ವೈರಿಂಗ್ ಜೋಡಣೆ ಕೆಲಸ ಪರಿಶೀಲಿಸಿದರು. 5.43 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಹಾಗೂ ಹೊಸ ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಪ್ರಶಾಂತ ಜಿ. ಸೇರಿ ಇತರರು ಇದ್ದರು.