

ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯವಿದ್ದಷ್ಟು ವ್ಯಾಕ್ಸಿನ್ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಾಯಕರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯಮಠ ಮಾತನಾಡಿ, ಕೋವಿಡ್ ಮಾಹಾಮಾರಿಯು ದೇಶದಲ್ಲಿ ಪ್ರತಿಯೊಂದು ಕುಟುಂಬಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಆಘಾತ ನೀಡಿದೆ. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಒಂದೇ ಇದಕ್ಕೆ ಪರಿಹಾರ. ಈ ಗಂಭೀರ ವಿಷಯ ಕೇಂದ್ರ, ರಾಜ್ಯ ಸರ್ಕಾರದ ಗಮನಕ್ಕೆ ಇದ್ದರೂ ಸಹ ನಿರ್ಲಕ್ಷೃ ವಹಿಸಿದೆ. ಬೇಜವಾಬ್ದಾರಿಯಿಂದ ವರ್ತಿಸಿವೆ ಎಂದು ಕಿಡಿಕಾಡಿದರು.
ಲಸಿಕೆ ಪಡೆಯಲು ಆನ್‌ಲಾಯಿನ್‌ನಲ್ಲಿ ನೋಂದಾಯಿಸಲು ಹೇಳಿ ಸದರಿ ಲಸಿಕೆ ಕಾರ್ಯಕ್ರಮವು ವಿಳಂಬವಾಗುವಂತೆ ನೋಡಿಕೊಂಡು ತನ್ನ ಜನವಿರೋಧಿ ಧೋರಣೆಯನ್ನು ತೋರಿಸಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೇ 31 2021 ರ ಪ್ರಕಾರ ಕೇವಲ 4.45 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಿದೆ. ಅದು ನಮ್ಮ ಜನಸಂಖ್ಯೆಯ ಕೇವಲ ಶೇ.3.17 ಸರಾಸರಿ 16 ಲಕ್ಷ ಲಸಿಕೆ ಪ್ರತಿದಿನ ನೀಡಲಾಗುತ್ತದೆ. ಹೀಗಾದಲ್ಲಿ 136 ಕೋಟಿ ಜನಸಂಖ್ಯೆಯನ್ನು ಲಸಿಕೆ ತಲುಪಲು ಮೂರು ವರ್ಷ ಮೇಲ್ಪಟ್ಟು ಅವಧಿ ಬೇಕಾಗುತ್ತದೆ. ಅದಕ್ಕಾಗಿ ಪ್ರತಿದಿನ ಒಂದು ಕೋಟಿ ವಯಸ್ಕ ಜನರಿಗೆ ಲಸಿಕೆ ನೀಡಿದರೆ ಎಷ್ಟೋ ಜನರ ಜೀವಗಳನ್ನ ಉಳಿಸಬಹುದು. ನಮ್ಮ ದೇಶದ ಜನ ಕರೊನಾ ರೋಗದಿಂದ ನರಳುತ್ತಿರಬೇಕಾದರೆ 66 ಕೋಟಿ ಡೋಸ್ ವ್ಯಾಕ್ಸಿನ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಇದು ಪ್ರಜೆಗಳಿಗೆ ಮೋಸ ಮಾಡಿದಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ, ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷ ರಾಜು ಜವಳಿ, ಬಾದಾಮಿ ಬ್ಲಾಕ್ ಅಧ್ಯಕ್ಷ ಮಲ್ಲಣ್ಣ ಎಲಿಗಾರ, ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ರೇಣುಕಾ ನಾಮಗೌಡರ, ಜಿಲ್ಲಾ ಸೇವಾದಳದ ಅಧ್ಯಕ್ಷ ಎನ್.ಬಿ.ಗಸ್ತಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸಂತೋಷ ಬಗಲಿದೇಸಾಯಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮುತ್ತು ಜೋಳದ, ನಿಂಗನಗೌಡ ಪಾಟೀಲ, ಇಬ್ರಾಹಿಂ ಕಲಾದಗಿ, ಷರೀ ಮುಲ್ಲಾ, ಆನಂದ ಶಿಲ್ಪಿ ಸೇರಿ ಇತರರು ಉಪಸ್ಥಿತರಿದ್ದರು.
ಕರೊನಾ ಸೋಂಕು ಕಳೆದ ವರ್ಷದಿಂದ ದೇಶದ ಜನರ ಜೀವ, ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ವ್ಯಾಕ್ಸಿನ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ವ್ಯಾಕ್ಸಿನ ಬಗ್ಗೆ ನಿರ್ಲಕ್ಷೃ ವಹಿಸಿದಲ್ಲಿ ದೊಡ್ಡ ಅಪಾಯ ಉಂಟಾಗಲಿದೆ.
- ಎಚ್.ವೈ.ಮೇಟಿ ಮಾಜಿ ಸಚಿವ