

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ತೋಟಗಾರಿಕೆ ಮೇಳದ ಎರಡನೇ ದಿನ ಭಾನುವಾರ ರೈತರು, ಕೃಷಿಕರು, ಸಂಶೋಧಕರು ಆದಿಯಾಗಿ ಎಲ್ಲ ವರ್ಗದ ಜನರು ಭೇಟಿ ನೀಡಿದರು. ತರಕಾರಿ, ಹೂ ಕೃಷಿಗೆ ಅನ್ನದಾತರು ಮನಸೋತರೆ, ಮತ್ಸೃಲೋಕಕ್ಕೆ ಮಕ್ಕಳು, ಮಹಿಳೆಯರು ಫಿದಾ ಆದರು.
ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಜನರಿಗೆ ತೋವಿವಿ ಅವಕಾಶ ಕಲ್ಪಿಸಿದ್ದರೂ ಭಾನುವಾರ ವಿಕೆಂಡ್ ಕಾರಣಕ್ಕೆ ಬೆಳಗ್ಗೆ 11 ಗಂಟೆಯಿಂದ ತಂಡೋಪ ತಂಡವಾಗಿ ಜನರು ಆಗಮಿಸಿದರು. ಎರಡನೇ ದಿನ ಸಾರ್ವಜನಿಕರು ಕುಟುಂಬ ಸಮೇತರಾಗಿ ವಿವಿಯತ್ತ ಹೆಜ್ಜೆ ಹಾಕಿದರು.
ತರಕಾರಿ, ಹೂ ಪ್ರಾತ್ಯಕ್ಷಿಕೆಗೆ ಮನಸೋತ ಅನ್ನದಾತ
ಅನ್ನದಾತರಿಗೆ ಪುಷ್ಪ ಹಾಗೂ ತರಕಾರಿ ಕೃಷಿಯಿಂದ ಆಗುವ ಲಾಭ, ಅನುಕೂಲ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ವಿವಿ ಆವರಣದಲ್ಲಿ ತರಕಾರಿ, ಹೂ ಪ್ರಾತ್ಯಕ್ಷಿಕೆ ಅಳವಡಿಸಲಾಗಿತ್ತು. ಪುಷ್ಪ ಕೃಷಿ ವಿಭಾಗದಲ್ಲಿ ಚಂಡು, ಆಫ್ಟಿರ್, ಡೇರಿ, ಸಾಲ್ಬಿಯಾ, ಪೆಟೊನಿಯಾ, ಸಿರೋಶಿಯಾ, ಸೇವಂತಿ, ಕ್ರಾಸ್‌ಮಸ್, ಫ್ರಂಚ್ ಮಾರಿಗೋಲ್ಡ್, ಅಡಿಕೆ ಹೂ, ಗಲಾಟೆ, ಲಲ್ಲಿ, ಸುಗಂಧಿರಾಜ, ಜಿನೀಯ, ಕೆಲೊಂಡಾ, ಫ್ಯಾಸ್ಸಿ ಸೇರಿದಂತೆ 35 ಕ್ಕೂ ಹೆಚ್ಚು ನಾನಾ ಬಗೆಯ ಹೂಗಳು ಆಕರ್ಷಿಸಿದವು. ಅಲ್ಲದೆ ಟೊಮ್ಯಾಟೋ, ಮೆಣಸಿನಕಾಯಿ, ಸೌತೆಕಾಯಿ, ಕುಂಬಳಕಾಯಿ, ಸೂರೆಕಾಯಿ, ಪುಟ್ಟಿ ಕಾಯಿ, ಗಜ್ಜರಿ, ಬದನೆ, ಮೂಲಂಗಿ, ಬೀನ್ಸ್, ಅಲಸಂದಿ, ಹೂಕೋಸು, ಎಲೆ ಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆಯನ್ನು ಅನ್ನದಾತರು ವೀಕ್ಷಿಸಿದರು.
ಕೃಷಿ ಭೂಮಿಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಖರ್ಚು ವೆಚ್ಚ, ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತದಿಂದ ವಿವಿ ವಿಜ್ಞಾನಿಗಳು ಅಂದುಕೊಂಡಂತೆ ಯಶಸ್ಸು ಕಾಣುವುದು ಸುಲಭದ ಮಾತಲ್ಲ. ಇನ್ನು ಪ್ರಾತ್ಯಕ್ಷಿಕೆಗಳಲ್ಲಿ ಸರಿಯಾದ ಮಾಹಿತಿ ನೀಡಲು ವಿಜ್ಞಾನಿಗಳು ಇಲ್ಲ. ಕೇವಲ ವಿವಿ ವಿದ್ಯಾರ್ಥಿಗಳು ಇದ್ದಾರೆ. ಜಾತ್ರೆ ರೀತಿ ಮೇಳ ಆಗಬಾರದು. ಕೃಷಿಕರಿಗೆ ಉಪಯುಕ್ತವಾದ ಜ್ಞಾನ ದೊರೆಯುವಂತಾಗಬೇಕು ಎಂದು ಅನ್ನದಾತರು ವಿಜಯವಾಣಿ ಎದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಪುಷ್ಪ ಕೃಷಿಯಲ್ಲಿ ಬೆಳೆದ ಅಲಂಕಾರಿಕ ಹೂಗಳು, ಮತ್ಸೃಗಳ ಲೋಕಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರು ಫಿದಾ ಆದರು. ಕುಟುಂಬ ಸದಸ್ಯರು, ಮಿತ್ರರೊಂದಿಗೆ ಸೆಲ್ಫಿ ತೆಗೆದುಕೊಳ್ಳತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ವಿಚಾರ ಸಂಕಿರಣದತ್ತ ಮುಖ ಮಾಡಲಿಲ್ಲ. ಬೆರಳೆಣಿಕೆ ಜನ ರೈತರು, ವಿವಿ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.
ಮುಧೋಳ ಹೌಂಡಗಾಗಿ ಮುಗಿ ಬಿದ್ದ ಜನ
ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಮೀನುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಡ್ರೈಗರ್ ಹಾಸ್ಟರ್, ರೆಡ್ ಹಾಸ್ಟರ್, ಗೋಲ್ಡ್, ಸಕ್ಕರ ಕ್ಯಾಟ್, ಬೆಳ್ಳಿ ಗೆಂಡೆ, ಕಟ್ಟಾ, ಟೈಗರ್ ಶಾರ್ಕ್, ಮಿಲ್ಕಿ ಕೋಯಿ, ಅಲಬಿನೋ ಶಾರ್ಕ್, ಕೋಯಿ ಕಾರ್ಫ್, ಸಿಲ್ವರ್ ಶಾಫ್, ಗಪ್ಪಿ ಸೇರಿದಂತೆ ನಾನಾ ರೀತಿಯ ಮೀನುಗಳು ಮತ್ಸೃಗಳ ಲೋಕ ಅನಾವರಣಗೊಳಿಸಿದ್ದವು. ಕೃಷಿ ಹೊಂಡ ಹಾಗೂ ಕೆರೆಗಳಲ್ಲಿ ಮೀನುಗಾರಿಕೆಯಿಂದ ಆಗುವ ಲಾಭಗಳ ಕುರಿತು ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ಇನ್ನು ಪಶು ಸಂಗೋಪನಾ ಇಲಾಖೆಯಿಂದ ದೇಸಿ ನಾಯಿ ತಳಿಯಾದ ಪ್ರಸಿದ್ಧ ಮುಧೋಳ ಹೌಂಡ್ ಪ್ರದರ್ಶನಕ್ಕಿಡಲಾಗಿದೆ. ಈಚೆಗೆ ಸೇನೆಗೆ ಸೇರಿರುವ ಹೌಂಡ್ ಬಗ್ಗೆ ತಿಳಿಯಲು ಜನರು ಮುಗಿ ಬಿದ್ದರು.
ಶಿಸ್ತು ಬದ್ಧವಾಗಿ ತೋಟಗಾರಿಕೆ ಕೃಷಿ ಮಾಡಿದಲ್ಲಿ ಲಾಭದಾಯಕವಾಗಿದೆ. ಪ್ರಾಕೃತಿಕ ವಿಕೋಪ ರೈತರನ್ನು ಹೈರಾಣ ಮಾಡುತ್ತಿದೆ. ಇನ್ನು ಮೇಳದಲ್ಲಿ ತರಕಾರಿ, ಪುಷ್ಪ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಇದೆ. ಇದು ವಾಸ್ತವದಲ್ಲಿ ಅಳವಡಿಸಿಕೊಳ್ಳುವುದು ಕಠಿಣ. ಖಾಸಗಿ ಕಂಪನಿಗಳ ಸಹಕಾರದೊಂದಿಗೆ ವಿವಿ ಆವರಣದಲ್ಲಿ ಬೆಳೆಯಲಾಗಿದೆ. ವಿಜ್ಞಾನಿಗಳು ಸಾಮಾನ್ಯ ಕೃಷಿಕರಿಗೆ ಸಾಧ್ಯವಾಗುವ ನಿಟ್ಟಿನಲ್ಲಿ ಪ್ರಯೋಗ ಮಾಡಬೇಕು. ವಿಜ್ಞಾನಿಗಳು ಲ್ಯಾಬ್ ಬಿಟ್ಟು ಹೊರಗೆ ಬರಬೇಕು. ಭೂ ತಾಯಿ ಕರ್ಮಭೂಮಿಯನ್ನಾಗಿ ಮಾಡಬೇಕು.
- ಧರಿಯಪ್ಪ ಸುಂಕದ ಬಾದಾಮಿ ರೈತ