ಚುನಾವಣೆಗೆ ಕೋಟಿ ಕೋಟಿ ಖರ್ಚು !

siddu savadi mar 20
Published on

ಬಾಗಲಕೋಟೆ: ಇತ್ತೀಚೆಗೆ ನಡೆದ ಬಿಡಿಸಿಸಿ ನಿರ್ದೇಶಕರ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹರಿಸಿದ್ದಾರೆ ಅನ್ನೋದು ಅಚ್ಚರಿ ಎನಿಸಿದರೂ ಸತ್ಯ!

ಈ ಮಾತನ್ನು ಅವರಿವರು ಹೇಳಿದ್ದಲ್ಲ. ಸ್ವತಃ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಗೆಲುವು ಪಡೆದಿರುವ ತೇರದಾಳ ಶಾಸಕ ಸಿದ್ದು ಸವದಿ ಅವರೇ ಈ ಸತ್ಯವನ್ನು ಹೊರಹಾಕಿದ್ದಾರೆ.

ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಪ್ರಸ್ತಾಪಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಾನು ಮೊದಲ ಸಲ ಸ್ಪರ್ಧೆ ಮಾಡಿದ್ದಾಗ 70 ಲಕ್ಷ ರೂಪಾಯಿ ಖರ್ಚು ಮಾಡಿ ಎಂಎಲ್ಎ ಆಗಿದ್ದೆ. ಈ ಸಲ ಭಾಳ ಖರ್ಚು ಬಂದಿತ್ತು. ಆದರೆ, ಮೊನ್ನೆ ನಡೆದ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂರೂವರೆ ಕೋಟಿ ರೂ. ಖರ್ಚು ಮಾಡಿದವರು ಇದ್ದಾರೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್‌ನಲ್ಲಿ ಹಣದ ಹೊಳೆಯೇ ಹರಿದಿದೆ. ಇದು ನಂದೊಂದೆ ಕ್ಷೇತ್ರ(ರಬಕವಿ-ಬನಹಟ್ಟಿ ಪಿಕೆಪಿಎಸ್)ವಲ್ಲ. ನೇಕಾರ ಕ್ಷೇತ್ರ, ಇತರ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲೂ ಹಾಗೆಯೇ ಆಗಿದೆ. ಏನು ಮಾಡುವುದು ದುಡ್ಡಿನ ಹೊಳೆ ಹರಿಸಿ ಅಲ್ಲಿ ಏನು ಸಿಗತ್ತದೆ? ತಿಂಗಳಿಗೊಮ್ಮೆ ಮೀಟಿಂಗ್ ಹೋದಾಗ ಒಂದು ಸಾವಿರ ರೂ. ಭತ್ಯೆ ಕೊಡುತ್ತಾರೆ. ಅದು ನಮ್ಮ ಎಣ್ಣೆಗೂ ಆಗಲ್ಲ ಎಂದರು.

ಜನರು ಕೂಡ ಹಂಗೆ ಆಗಿದ್ದಾರೆ. ಮೊದಲು ಮಾತು ಕೊಟ್ಟರೆ ರುಂಡ ಹೋದರೂ ನಾಲಿಗೆ ಬದಲಿಸುತ್ತಿರಲಿಲ್ಲ. ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕೆಲವು ಕಡೆಗೆ ಮೂವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ ಮೂವರ ಕಡೆಗೂ ದುಡ್ಡು ತೆಗೆದುಕೊಂಡು ಮೂವರಿಗೂ ಓಟು ಹಾಕುತ್ತೇವೆ ಎಂದು ಹೆಂಡತಿ ಮಕ್ಕಳ ಮೇಲೆ ಆಣೆ ಮಾಡಿದ್ದಾರೆ. ಒಬ್ಬರಿಗೆ ಓಟು ಹಾಕಿದ್ದಾರೆ. ನಂಗೆ ಏಕೆ ಓಟು ಹಾಕಿಲ್ಲ ಅಂತ ಕೇಳಿದರೆ ಮತ್ತೆ ಆಣೆ ಮಾಡಿ ನಿಮಗೆ ಹಾಕಿದ್ದೇವೆ ಅಂತಾರೆ. ಎಂತಹ ಆಶ್ಚರ್ಯ ನೋಡಿ, ಕಲಿಯುಗ ದಾಟಿ ಮತ್ತೊಂದು ಬಂತಾ ಅನ್ನಿಸುತ್ತದೆ ಎಂದು ಚುನಾವಣೆ ವ್ಯವಸ್ಥೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಬಹಳ ದಿನ ಉಳಿಯಲು ನಮ್ಮ ನಾಲಿಗೆ, ನಡವಳಿಕೆ, ಪ್ರಾಮಾಣಿಕತೆ ಸಮಾಜದಲ್ಲಿ ಇರಬೇಕು. ದುಡ್ಡು ಶಾಶ್ವತವಲ್ಲ, ದುಡ್ಡಿನಿಂದ ಆಳಬೇಕಿದ್ದರೆ ಈ ದೇಶವನ್ನು ಟಾಟಾ ಬಿರ್ಲಾ ಆಳುತ್ತಿದ್ದರು. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ ಎಂದರೆ ಇಲ್ಲಿ ಧರ್ಮ, ಸಂಸ್ಕೃತಿಗೆ ಬೆಲೆ ಇದೆ ಎನ್ನುವುದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಹಾಲಿಂಗಪುರ ಘಟನೆ ಮೆಲುಕು
ಇತ್ತೀಚೆಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಮಹಿಳೆಯರ ನೂಕಾಟ, ತಳ್ಳಾಟ ನಡೆದ ಬಗ್ಗೆಯೂ ಪ್ರಸ್ತಾಪಿಸಿದ ಶಾಸಕ ಸಿದ್ದು ಸವದಿ, ಅಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಒಂದು ಸೆಕೆಂಡ್‌ನಲ್ಲಿ ಏನೋ ನಡೆದು ಹೋಯಿತು. ಅದು ದೊಡ್ಡ ಪ್ರಚಾರ ಆಯಿತು. ಪಕ್ಷದ ಟಿಕೆಟ್ ಕೊಟ್ಟು, ಖರ್ಚು ಕೊಟ್ಟು ಗೆಲ್ಲಿಸಿದ ಬಳಿಕ ರಾತ್ರೋರಾತ್ರಿ ಅವರ ಕಡೆಗೆ ಹೋಗುತ್ತಾರೆ ಎಂದರೆ ಇವರಿಗೆ ಏನು ಮಾಡಬೇಕು? ಇದರಿಂದ ಕಾರ್ಯಕರ್ತರಿಗೆ ಸಿಟ್ಟು ಬರುತ್ತದೆ. ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಅಲ್ಲಿಗೆ ಹೋಗಿ ಗೆದ್ದು ಬರಬೇಕು. ಈ ಹಿಂದೆ ತೇರದಾಳದಲ್ಲಿ ಮೇಡಂ(ಉಮಾಶ್ರೀ) ಇದ್ದಾಗ ಏನಾಗಿತ್ತು? ನಮ್ಮ ಪಕ್ಷದ ಕಾರ್ಯಕರ್ತರನ್ನು ಬಡಿದರು. ಅವರು ಮಾಡುವುದು ಸರಿ, ನಾವು ಮಾಡುವುದು ತಪ್ಪಾ? ಆದರೂ ಮೊನ್ನೆ ನಮ್ಮದು ವಿಕೋಪಕ್ಕೆ ಹೋಗಿತ್ತು. ಅದನ್ನು ನಾನು ಸಮರ್ಥಿಸಿಕೊಳ್ಳಲ್ಲ. ವಿಷಾದ ವ್ಯಕ್ತಪಡಿಸಿದ್ದೇನೆ. ದುಡ್ಡು ಕೊಟ್ಟು, ಆಸೆ, ಆಮಿಷ ತೋರಿಸಿ ಹಿಂಬಾಗಿಲಿಂದ ಅಧಿಕಾರಕ್ಕೆ ಬರಲು ಅವರು ಯತ್ನಿಸುತ್ತಾರೆ. ಎಷ್ಟು ದಿನ ಅಂತ ಅವರಿಗೆ ಬಗ್ಗುವುದು? ಭಯಪಡಬೇಡಿ, ನಾವು ಅನ್ಯಾಯ ಮಾಡುವುದು ಬೇಡ, ಅನ್ಯಾಯ ಮಾಡುವವರನ್ನು ಸಹಿಸದೆ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net