

ಬಾಗಲಕೋಟೆ: ನವನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜರುಗಿದ 17 ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹರಿಹಾಯ್ದರು.
ಸಭೆ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಸಾಮಾನ್ಯ ಸಭೆಗಳಲ್ಲಿ ಅನೇಕ ಅಧಿಕಾರಿಗಳ ಗೈರಾಗುತ್ತಿದ್ದಾರೆ. ಪ್ರತಿಯೊಂದು ಸಾರಿ ಒಂದಿಲ್ಲೊಂದು ಕಾರಣ ಹೇಳುತ್ತಾರೆ. ಗೈರು ಉಳಿಯುತ್ತೇವೆ ಎನ್ನುವ ಬಗ್ಗೆಯೂ ಮಾಹಿತಿ ನೀಡುವುದಿಲ್ಲ ಎಂದು ಸಿಡಿಮಿಡಿಗೊಂಡರು.
ಇದಕ್ಕೆ ಧ್ವನಿಗೂಡಿಸಿದ ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಅಧಿಕಾರಿಗಳು ಈ ರೀತಿ ಮಾಡುವುದು ಸರಿಯಲ್ಲ. ಪ್ರತಿಯೊಂದು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಕಾಮಗಾರಿಗಳಿಗೆ ಚಾಲನೆ ನೀಡುವ ಶಾಸಕರ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೀಗ ಬಂದಿದೆ. ಮಧ್ಯಾಹ್ನದ ವೇಳೆ ಸಭೆಗೆ ಹಾಜರಾಗುತ್ತೇವೆ ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿ ಸದಸ್ಯರನ್ನು ಸಮಾಧಾನಗೊಳಿಸಿದರು.
ಬೇಸಿಗೆ ವೇಳೆ ಸರ್ಕಾರಿ ಶಾಲೆಗಳು ಮೂರು ತಿಂಗಳು ರಜೆ ಇರುತ್ತವೆ. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡುವುದಿಲ್ಲ. ಇದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ. ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಬೇಸಿಗೆ ರಜೆಯಲ್ಲಿಯೂ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ. ಬಸರಿಗಿಡದ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುವುದು. ವೇತನ ನೀಡುವ ಅವಕಾಶವಿದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ವೈ. ಹಲಗತ್ತಿ ಮಾತನಾಡಿ, ಕೇಂದ್ರ ಸರ್ಕಾರದ ದೀನ ದಯಾಳ ಉಪಾಧ್ಯಯ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತಿದೆ. ಅಲ್ಲದೆ, 9 ವ್ಯಾಟ್‌ನ ಒಂದು ಎಲ್‌ಇಡಿ ಬಲ್ಬ್ ಕೂಡ ಉಚಿತವಾಗಿ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಇರುವ ಬಗ್ಗೆ ಸದಸ್ಯರು ಮಾಹಿತಿ ನೀಡಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಉಪಾಧ್ಯಕ್ಷ ಸಂಗಣ್ಣ ಮುಧೋಳ, ಸದಸ್ಯರಾದ ಬಸವರಾಜ ಕೆಂಜೋಡಿ, ಎನ್.ಜಿ.ಮಾಗನೂರ, ರಾಜಶೇಖರ ಅಂಗಡಿ, ಪರಶುರಾಮ ಛಬ್ಬಿ ಇತರರು ಇದ್ದರು.
ಈ ಹಿಂದೆ ನಡೆದ ಸಾಮಾನ್ಯ ಸಭೆಗಳಲ್ಲಿ ಸೂಚಿಸಿದ ನಿರ್ಧಾರಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಬೇಕು. ಇದರಿಂದ ಸೂಚನೆಗಳು ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆಯುತ್ತದೆ. ಆ ಬಳಿಕ ಹೊಸ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕು.
- ಸಲೀಂ ಶೇಖ್ ತಾಪಂ ಸದಸ್ಯ
EndFragment