ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ 31 ಡೆಡ್‌ಲೈನ್

Valmimki-Prasannananda-puri1582981493
Published on

ಬಾಗಲಕೋಟೆ: ರಾಜ್ಯ ಸರ್ಕಾರ ಎಸ್ಟಿ ಸಮುದಾಯದ ನ್ಯಾಯಯುತ ಹಕ್ಕಾದ ಶೇ. 7.5 ಮೀಸಲಾತಿಯನ್ನು ಹೆಚ್ಚಿಸಬೇಕು. ಅಕ್ಟೋಬರ್ 31ರ ಒಳಗಾಗಿ ಆದೇಶ ಹೊರಡಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.

ಬಾಗಲಕೋಟೆ ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಲಿಂಗಸುಗೂರು ಎಸ್ಟಿ ಸಮಾವೇಶದಲ್ಲಿ ಸಿಎಂ ಆದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಮಾತು ಕೊಟ್ಟಿದ್ದರು. ಸಿಎಂ ಆದ ಬಳಿಕ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವರದಿ ಬಂದ ತಕ್ಷಣ ಜಾರಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಹೀಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಈಗಾಗಲೇ ಸಿಎಂ ಇದಕ್ಕೆ ಪೂರಕವಾಗಿ ಭರವಸೆ ನೀಡಿದ್ದರೂ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.

ಈ ಬಗ್ಗೆ ರಾಜ್ಯಾದ್ಯಂತ ಸಮುದಾಯದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಅದಾದ ಬಳಿಕ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಆರಂಭಿಸುತ್ತೇವೆ. ಅ.31 ರೊಳಗಾಗಿ ಸಿಎಂ ನಮಗೆ ಸಿಹಿ ಸುದ್ದಿ ಕೊಡಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಎಂದರು.

ಎಸ್ಟಿ ಮೀಸಲಾತಿಗಾಗಿ ಹಾಲುಮತ ಸಮಾಜ ಹೋರಾಟ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಹೋರಾಟ ಪ್ರತಿಯೊಬ್ಬರ ಹಕ್ಕು. ಇದಕ್ಕೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಮೀಸಲಾತಿ ಕೊಡಿ ಎಂದು ಕೇಳುವುದು ಪ್ರತಿಯೊಂದು ಸಮುದಾಯದ ಹಕ್ಕು ಎಂದು ತಿಳಿಸಿದರು.

ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಬೇಡಿಕೆ 42 ವರ್ಷಗಳದ್ದು, ಅಲ್ಲಿಂದ ಹೋರಾಟ ನಡೆಯುತ್ತಲೆ ಇದೆ. ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿದ್ದು, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಡೆದೇ ಇರುತ್ತದೆ ಎಂದರು.

ರಾಮುಲು ಅಸಮಾಧಾನ ಗೊತ್ತಿಲ್ಲ
ಸಚಿವ ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆಯಿಂದ ಕೈಬಿಟ್ಟಿರುವ ಬಗ್ಗೆ ಅವರಿಗೆ ಒಪ್ಪಿಗೆ ಇದೆಯೋ ಅಥವಾ ಅಸಮಾಧಾನ ಇದೆಯೋ ಅಂತ ನನಗೆ ಗೊತ್ತಿಲ್ಲ. ಆ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ ಎಂದ ಶ್ರೀಗಳು, ಚುನಾವಣೆ ಸಂದರ್ಭದಲ್ಲಿ ಅವರಿಗೆ ಡಿಸಿಎಂ ಅಭಯ ನೀಡಿದ್ದಾರೆ ಎಂದು ಮಾಧ್ಯಮಗಳಿಂದ ಕೇಳಿದ್ದೆ. ಆ ಬಗ್ಗೆ ಬಿಜೆಪಿ ಮುಖಂಡರು ಹೇಳಿರುವುದು ಗೊತ್ತಿಲ್ಲ. ಆದರೆ, ಡಿಸಿಎಂ ಹುದ್ದೆ ಕೊಡದೆ ಇರುವುದು ಅನ್ಯಾಯ ಎಂದು ಹೇಳುತ್ತೇನೆ. ಸದ್ಯ ನಮ್ಮ ಮುಂದೆ ಇರುವುದು ಎಸ್ಟಿ ಮೀಸಲಾತಿ ಹೆಚ್ಚಳ. ಈ ಬೇಡಿಕೆ ಈಡೇರಿದ ಬಳಿಕ ಬೇಕಿದ್ದರೆ ಯಡಿಯೂರಪ್ಪ ಅವರ ಬಳಿ ತೆರಳಿ ಡಿಸಿಎಂ ಯಾಕೆ ಸಿಎಂ ಹುದ್ದೆ ಸಮಾಜಕ್ಕೆ ಕೊಡಿ ಎಂದು ಒತ್ತಾಯ ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net