

ಬಾಗಲಕೋಟೆ: ಜಿಲ್ಲಾದ್ಯಂತ ಜೂ.25 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿವೆ. ಸುರಕ್ಷಿತ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣವಾಗಿ ಡಿ ಸ್ಯಾನಿಟೈಜೇಶನ್ ಮಾಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಭೀತಿ ಹಿನ್ನೆಲೆ ಪರೀಕ್ಷೆಗೆ ಹಾಜರಾಗುವ ಮಕ್ಕಳ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ ಒಟ್ಟು 123 ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳನ್ನು ಡಿ ಸ್ಯಾನಿಟೈಜೇಶನ್ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಪರೀಕ್ಷೆ ಬರೆಯುವ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಎರಡೆರಡು ಮಾಸ್ಕ್‌ಗಳನ್ನು ನೀಡಬೇಕು. ದಿನಕ್ಕೆ 5 ಮಿಲಿಯಂತೆ ಎಲ್ಲ 6 ವಿಷಯಗಳ ಪರೀಕ್ಷೆಗಳಿಗೆ 30 ಮಿಲಿಯಂತೆ ಒಟ್ಟು 950 ಲೀಟರ್ ಸ್ಯಾನಿಟೈಸರ್‌ನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಬೇಕು. ಪ್ರತಿ 200 ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕಾೃನರ್ ಹಾಗೂ 492 ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮಾರ್ಗ ನಕ್ಷೆಗಳಂತೆ ಬಸ್‌ಗಳನ್ನು ವ್ಯವಸ್ಥೆ ಮಾಡಿ ಎಲ್ಲ ಮಕ್ಕಳು ತಮ್ಮ ವಾಸಸ್ಥಳ, ಶಾಲೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಸುಗಮವಾಗಿ ತಲುಪುವಂತೆ ನೋಡಿಕೊಳ್ಳತಕ್ಕದ್ದು. ಕಂಟೇನ್ಮೆಂಟ್ ವಲಯದಲ್ಲಿರುವ ಮಕ್ಕಳು ಪರೀಕ್ಷೆ ಸಮಯದಲ್ಲಿ ಆರೋಗ್ಯ ಇಲಾಖೆ ನೀಡುವ ಎನ್-95 ಮಾಸ್ಕ್‌ಗಳನ್ನು ಧರಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಬರೆಯಲು ವ್ಯವಸ್ಥೆ ಮಾಡಬೇಕು. ಪರಸ್ಪರ ಅಂತರ ಕಾಯ್ದುಕೊಂಡು ಪ್ರತಿ ಕೊಠಡಿಗೆ ಗರಿಷ್ಠ 18 ಮಕ್ಕಳನ್ನು ಕೂಡಿಸಬೇಕು. ಕುಡಿಯುವ ನೀರನ್ನು ಮಕ್ಕಳೇ ತರಬೇಕು. ಪೆನ್, ಕಂಪಾಸ್ ಪೆಟ್ಟಿಗೆಯಂತಹ ಇತರ ಸಾಮಗ್ರಿಗಳನ್ನು ಬೇರೆಯವರಿಂದ ಪಡೆಯುವಂತಿಲ್ಲ ಎಂದರು.
ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶಿಸುವಾಗ, ಮರಳಿ ಹೋಗುವಾಗ ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಅಳವಡಿಸಬೇಕು. ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಪರೀಕ್ಷಾ ಕೇಂದ್ರಗಳಿಂದ ಜಿಲ್ಲಾ ಸ್ಟ್ರಾಂಗ್ ರೂಮ್‌ಗಳಿಗೆ ಪಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ಸಾಗಣೆಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸಿ.ಆರ್.ಪಿ.ಸಿ. ಕಲಂ ಜಾರಿ ಮಾಡಲಾಗುವುದು. ಝರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಆದೇಶಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿ ಇತರ ಇಲಾಖೆ ಅಧಿಕಾರಿಗಳು, ಎಲ್ಲ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.
ಪರೀಕ್ಷೆ ಬರೆಯಲಿದ್ದಾರೆ 31502 ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ 97 ರೆಗ್ಯೂಲರ್, 2 ಖಾಸಗಿ, 24 ಬ್ಲಾಕ್ ಕೇಂದ್ರಗಳು ಸೇರಿ ಒಟ್ಟು 123 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 27436 ಶಾಲಾ ಅಭ್ಯರ್ಥಿಗಳು, 2627 ಪುನರಾವರ್ತಿತ, 526 ಖಾಸಗಿ, 237 ಪುನರಾವರ್ತಿತ ಖಾಸಗಿ, 676 ಬೇರೆ ಜಿಲ್ಲೆಗಳಿಂದ ಈ ಜಿಲ್ಲೆಗೆ ಬಂದ ಅಭ್ಯರ್ಥಿಗಳು ಸೇರಿ ಒಟ್ಟು 31502 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದಾರ ತಿಳಿಸಿದರು.
EndFragment