ಮುರುಗೇಶ ನಿರಾಣಿ ಕೈ ನಾಯಕರು ಗುಟುರು

dvg Murugesh nirani press meet apr 11-
Published on

ಬಾಗಲಕೋಟೆ: ವಿಧಾನ ಪರಿಷತ್ ವಿ.ಪಕ್ಷ ನಾಯಕ ಎಸ್.ಆರ್.ಪಾಟೀಲ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದ ಬೀಳಗಿ ಶಾಸಕ, ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಬೀಳಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಖಡಕ್ ಮಾತಿನ ಮೂಲಕ ಗುದ್ದು ನೀಡಿದ್ದಾರೆ.

ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಬೀಳಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಬೀಳಗಿ ಕ್ಷೇತ್ರಕ್ಕೆ ಉದ್ಯೋಗ, ಶಿಕ್ಷಣ, ಸಹಕಾರ ರಂಗಕ್ಕೆ ನಿರಾಣಿ ಕುಟುಂಬದ ಕೊಡುಗೆ ಏನು, ಎಸ್.ಆರ್.ಪಾಟೀಲ ಅವರ ಕೊಡಗೆ ಏನು ಎನ್ನುವುದು ಬಹಿರಂಗ ಚರ್ಚೆಗೆ ಬರಲಿ. ನಾವು ದಾಖಲೆ ಸಮೇತ ಬರುತ್ತೇವೆ. ಶಾಸಕ ಮುರಗೇಶ ನಿರಾಣಿ ಸುಳ್ಳು ಆರೋಪಗಳ ಸರದಾರ. ತಮ್ಮ ಅಹಂಕಾರ ವರ್ತನೆಯನ್ನು ತೊರೆಯಬೇಕು. ಇಲ್ಲವಾದಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಜಿ.ಪಂ ಸದಸ್ಯ ಬಸವರಾಜ ಖೋತ ಮಾತನಾಡಿ, ಬೀಳಗಿ ಶುಗರ್ಸ್‌ 600 ಕೋಟಿ ರೂ. ಸಾಲ ಹೊಂದಿದೆ ಎಂದು ಮುರಗೇಶ ನಿರಾಣಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇದು ಹಸಿ ಸುಳ್ಳು. ಎಸ್.ಆರ್.ಪಾಟೀಲ ಅವರು 2002 ರಲ್ಲಿ ಕಾರ್ಖಾನೆ ಆರಂಭಿಸಿದಾಗ ಮುರಗೇಶ ನಿರಾಣಿ ಅವರನ್ನು ಪಾಲುದಾರರಾಗಿ ಸೇರಿಸಿಕೊಂಡು ಎಲ್ಲ ಜವಾಬ್ದಾರಿ ನೀಡಿದರು. ಆದರೇ ಮುರಗೇಶ ನಿರಾಣಿ ಮಾಡಿದ ಕೆಟ್ಟ ಕೆಲಸದಿಂದ ಕಾರ್ಖಾನೆ ನಡೆದಂತಹ ಸ್ಥಿತಿ ನಿರ್ಮಾಣವಾಯಿತು. ಆಗ ಎಸ್.ಆರ್.ಪಾಟೀಲ 60 ಕೋಟಿ ಪುನಃ ಸಾಲ ಪಡೆದು ಕಾರ್ಖಾನೆಯಲ್ಲಿದ್ದ ಮೋಡಕಾ ಯಂತ್ರ, ವಸ್ತುಗಳನ್ನು ತೆಗೆದು ಹೊಸದು ಅಳವಡಿಸಿದರು. ಪರಿಣಾಮ ಕಾರ್ಖಾನೆ ಇಂದು ಸಾವಿರಾರು ಕಬ್ಬು ಬೆಳೆಗಾರರು, ಕಾರ್ಮಿಕರಿಗೆ ಅನ್ನ,ಆಶ್ರಯ ನೀಡಿದೆ. ನಿರಾಣಿ ಅವರೇ ಎಷ್ಟು ಜನ ಹಿಂಬಾಲಕರನ್ನು ಬೆಳೆಸಿದ್ದಾರೇ ಅಂತ ಕೇಳಿದ್ದೀರಿ. ನೀವು ಸೇರಿದಂತೆ ಅನೇಕರು ರಾಜಕೀಯವಾಗಿ ಬೆಳೆಯಲು ಅವರೇ ಕಾರಣ. ನೀವು ಸಹೋದರರನ್ನು ಜಿ.ಪಂ ಸದಸ್ಯ, ಡಿಸಿಸಿ ನಿರ್ದೇಶಕ, ವಿಧಾನ ಪರಿಷತ್ ಸದಸ್ಯರಾಗಿ ಮಾಡಿದ್ದೀರಿ ಹೊರತು ಬೇರೆ ಯಾರು ಬೆಳೆಸಿದ್ದರೀ ಎಂದು ಮುರಗೇಶ ನಿರಾಣಿ ಅವರ ಮೇಲೆ ಹರಿಹಾಯ್ದರು.

ಜಿ.ಪಂ ಸದಸ್ಯ ಹನುಮಂತ ಕಾಖಂಡಕಿ ಮಾತನಾಡಿ, ಎಸ್.ಆರ್.ಪಾಟೀಲ ಸಹಕಾರಿ ಸೇವೆ ಗಮನಿಸಿ ನಿಮ್ಮದೆ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿದೆ. ಹೀಗಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವರನ್ನು ಅವಿರೋಧ ಆಯ್ಕೆ ಮಾಡಬೇಕು ಎನ್ನುವ ಆಸೆಯಿಂದ ಬೀಳಗಿ ತಾಲೂಕಿನ ಜನತೆಗೆ ಇತ್ತು. ಆದರೇ ನೀವು ಚುನಾವಣೆ ನೇರವಾಗಿ ಸ್ಪರ್ಧೆ ಮಾಡದೇ ಈರಣ್ಣ ಗಿಡ್ಡಪ್ಪಗೋಳ ಅವರನ್ನು ಕಣಕ್ಕೆ ಇಳಿಸಿ ಬಲಿಪಶು ಮಾಡಿದ್ದೀರಿ. ನಿಮಗೆ ತಾಕತ್ತು ಇದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಕಾಂಗ್ರೆಸ್ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕೆ ಇಳಿಸುತ್ತದೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಕಾದು ನೋಡಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಮುಖಂಡ ಸತ್ತಪ್ಪ ಮೇಲ್ನಾಡ ಮಾತನಾಡಿ, ಜಿಲ್ಲೆಯಲ್ಲಿ ಹಾಲುಮತ ಸಮಾಜದವರಿಗೆ ಸಕ್ಕರೆ ಕಾರ್ಖಾನೆ ಇರಲಿ ಅಂತ ಎಲ್ಲರು ಒಗ್ಗಟ್ಟಾಗಿ ಬಿ.ಬಿ.ಚಿಮ್ಮನಕಟ್ಟಿ ಅವರ ನೇತೃತ್ವದಲ್ಲಿ ಬಾದಾಮಿ ಶುಗರ್ಸ್‌ ಸ್ಥಾಪಿಸಿದರು. ಮುರಗೇಶ ನಿರಾಣಿ ಮೋಸದಿಂದ 90 ವರ್ಷದಷ್ಟು ಹಳೇ ಯಂತ್ರ ಅಳವಡಿಸಿದರ ಪರಿಣಾಮ ಕಾರ್ಖಾನೆ ಬಂದ್ ಆಯಿತು. ಚಿಮ್ಮನಕಟ್ಟಿ ಆರ್ಥಿಕವಾಗಿ ದಿವಾಳಿ ಆದರು. ಈದೀಗ ಕಡಿಮೆ ಮೊತ್ತಕ್ಕೆ ಖರೀದಿಸಿ ಅದೇ ಕಾರ್ಖಾನೆ ಮಾಲೀಕರಾಗಿದ್ದಾರೆ. ಇದು ಕುತಂತ್ರದ ಫಲವೇ ಎಂದು ಆರೋಪಿಸಿದರು.

ಅಶ್ವಮೇಧ ಕುದುರೆ ಜನರೇ ಕಟ್ಟಿ ಹಾಕುತ್ತಾರೆ
ಮುಖಂಡ ಬಸವಪ್ರಭು ಸರನಾಡಗೌಡರ ಮಾತನಾಡಿ, ಎಸ್.ಆರ್.ಪಾಟೀಲ ಹಿಂಬಾಗಿಲಿನ ರಾಜಕಾರಣ ಮಾಡುತ್ತಾರೆ? ನೇರವಾಗಿ ಚುನಾವಣೆ ಎದುರಿಸಲಿ ಎಂದು ಮುರಗೇಶ ನಿರಾಣಿ ಸವಾಲು ಹಾಕಿದ್ದಾರೆ. ಗಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಮತ ಪಡೆದು ಎಸ್.ಆರ್.ಪಾಟೀಲ ನಾಲ್ಕ ಬಾರಿ ವಿಧಾನ ಪರಿಷತ್ತ ಪ್ರವೇಶ ಮಾಡಿದ್ದಾರೆ. ಇದು ಸಂವಿಧಾನಾತ್ಮಕ ಚುನಾವಣೆ ಅಲ್ಲವೇ. ಇದು ಅಲ್ಲಗಳೆದರೇ ತಮ್ಮ ಸಹೋದರ ಎಚ್.ಆರ್.ನಿರಾಣಿ ವಿಧಾನ ಪರಿಷತ್ ಚುನಾವಣೆ ಯಾವುದು? ನಿರಾಣಿ ಹೇಳಿಕೆಯಿಂದ ಗ್ರಾ.ಪಂ,ತಾ.ಪಂ, ಜಿ.ಪಂ ಸದಸ್ಯರಿಗೆ ಅವಮಾನವಾಗಿದ್ದು, ಕೂಡಲೇ ಅವರ ಕ್ಷೇಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಮುರಗೇಶ ನಿರಾಣಿ ತಮ್ಮ ವಾಟ್ಸ್‌ಪ್‌ಗಳಲ್ಲಿ ಹಿಂದುಗಳ ದೇವರುಗಳ ಬಗ್ಗೆ ಕೆಟ್ಟದಾದ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಇದೀಗ ತಮ್ಮನ್ನು ಆಶ್ವಮೇಧ ಕುದರೆಗೆ ಹೋಲಿಕೆ ಮಾಡಿಕೊಂಡಿರುವುದು ಎಷ್ಟು ಸರಿ? ನಾವು ಯಾರು ನಿಮ್ಮ ಬೆಳವಣಿಗೆ ತಡೆಯುವದಿಲ್ಲ. ಈ ಅಹಂಕಾರದ ವರ್ತನೆಗೆ ಜನರೇ ಉತ್ತರ ನೀಡುತ್ತಾರೆ. ಅಶ್ವಮೇಧ ಕುದರೆ ಜನರೇ ಕಟ್ಟಿ ಹಾಕುತ್ತಾರೆ ಎಂದು ಗುಡುಗಿದರು.

ಬೀಳಗಿ ಮತಕ್ಷೇತ್ರದಲ್ಲಿ 1 ಲಕ್ಷ ಎಕರೇ ನೀರಾವರಿ ಒಳಪಡಿಸಿದ್ದೇನೆ ಎಂದು ಶಾಸಕ ಮುರಗೇಶ ನಿರಾಣಿ ಹೇಳಿದ್ದಾರೆ. ಈ ಬಗ್ಗೆ ದಾಖಲೆ ಬಿಡುಗಡೆಗೊಳಿಸಲಿ. ಸುಖಾಸುಮ್ಮನೇ ವೈಯಕ್ತಿಕ ಧ್ವೇಷದಿಂದ ರಾಜಕಾರಣ ಮಾಡುವುದು ಸಲ್ಲ. ತಾವು ಯಾವ ರೀತಿ ಚುನಾವಣೆ ಮಾಡಿತ್ತೀರಿ ಎನ್ನುವುದು ಜನರಿಗೆ ಗೊತ್ತಿದೆ. ಮುಂಬಾಗಲು, ಹಿಂಬಾಗಿಲಿನ ರಾಜಕಾರಣ ಯಾರದ್ದು ಎನ್ನುವುದು ಜನರಿಗೆ ಅರ್ಥವಾಗಿದೆ.
- ಜೆ.ಟಿ.ಪಾಟೀಲ ಬೀಳಗಿ ಮಾಜಿ ಶಾಸಕ

ಡಿಸಿಸಿ ಬ್ಯಾಂಕ್ ಅಖಂಡ ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟಾಗ ಅನೇಕ ಜನರು ಕೆಟ್ಟದಾದ ಮಾತುಗಳನ್ನು ಆಡಿದ್ದರು. ಬಾಗಲಕೋಟೆ ಡಿಸಿಸಿ ಬ್ಯಾಂಕ್‌ಗೆ ಎಸ್.ಆರ್.ಪಾಟೀಲ ಪ್ರಥಮ ಅಧ್ಯಕ್ಷರಾದ ಬಳಿಕ ಬ್ಯಾಂಕ್ ಚಿತ್ರಣವೇ ಬದಲಾಯಿತು. ಇದರಿಂದ 2007 ರಲ್ಲಿ ತಮ್ಮ ಸಮ್ಮಿಶ್ರ ಸರ್ಕಾರ ಸಹಕಾರಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿತು. ಸಹಕಾರಿ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸಾಧನೆಗಳನ್ನು ಬಹಿರಂಗ ಚರ್ಚೆ ಬರಲಿ. ಇನ್ನು ಬಾಪೂಜಿ ಶಿಕ್ಷಣ ಸಂಸ್ಥೆಯ ಮೇಲೆ ನೂರಾರು ಕೋಟಿ ರೂ.ಸಾಲ ತೆಗೆದುಕೊಂಡಿದ್ದಾರೆ ಅಂತ ಆರೋಪಿಸಿದ್ದು, ಇದು ಶುದ್ಧ ಸುಳ್ಳು. ಶಿಕ್ಷಣ ಸಂಸ್ಥೆಯ ಮೇಲೆ ಸಾಲವಿಲ್ಲ.
- ಎಂ.ಎನ್.ಪಾಟೀಲ ಬಾಪೂಜಿ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net