

ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ 14ರ ವಯೋಮಿತಿ ಬಾಲಕರ ವಿಭಾಗದಲ್ಲಿ ಬಾಗಲಕೋಟೆ ತಂಡ ಹಾಗೂ 17ರ ವಯೋಮಿತಿ ಬಾಲಕರ ವಿಭಾಗದಲ್ಲಿ ಶಿರಸಿ ತಂಡಗಳು ಚಾಂಪಿಯನ್‌ಗಳಾಗಿ ಹೊರಹೊಮ್ಮಿದವು.
ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯಾವಳಿಯಲ್ಲಿ 17ರ ವಯೋಮಿತಿಯೊಳಗಿನ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಧಾರವಾಡ ತಂಡವನ್ನು 30-32 ರಿಂದ ಶಿರಸಿ ತಂಡವು ಸೋಲಿಸಿತು. ಇದಕ್ಕೂ ಮುನ್ನ ನಡೆದ 14ರ ವಯೋಮಿತಿಯೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ಕಾರವಾರ ಬಾಗಲಕೋಟೆ ನಡುವೆ ತೀವ್ರ ಹಣಾಹಣಿಯೊಂದಿಗೆ ಬಾಗಲಕೋಟೆ ತಂಡ 9 ಅಂಕಗಳಿಂದ ವಿಜಯ ಪತಾಕೆ ಹಾರಿಸಿತು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪ್ರೊ. ಬಸವರಾಜ ಕೊಣ್ಣೂರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕೆ. ಬಸಣ್ಣವರ, ಗ್ರಾಮದ ಪ್ರಮುಖರಾದ ಬಿ.ಎಸ್. ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಬೀರಪ್ಪ ಹಳೇಮನಿ, ಬಸವರಾಜ ಕುಂಚನೂರ, ಮುತ್ತು ಢವಳೇಶ್ವರ, ರಾಜು ಬಗನಾಳ, ಪ್ರಭು ಮುಧೋಳ, ಶೀವಪ್ಪ ನಾಗನೂರ, ಪ್ರಕಾಶ ಪಾಟೀಲ, ಸಲೀಮ ಸರಕಾವಸ ಇದ್ದರು.