ಭಕ್ತರ ಇಷ್ಟಾರ್ಥ ಈಡೇರಿಸುವ ಸದ್ಗುರು ಅಲ್ಲೀಪುರ ಶ್ರೀ ಮಹಾದೇವ ತಾತ

bgk tatha
Published on

ಬಾಗಲಕೋಟೆ: ಸದ್ಗುರು ಅಲ್ಲೀಪುರ ಶ್ರೀ ಮಹಾದೇವ ತಾತನವರು ಮಹಾನ್ ತಪಸ್ವಿಗಳಾಗಿದ್ದರು. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಲೀಲಾ ಮೂರ್ತಿಯಾಗಿದ್ದರು ಎಂದು ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಅಲ್ಲೀಪುರ ಮಹಾದೇವ ತಾತನವರ 37ನೇ ವರ್ಷದ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ತಾತನವರು ತಮ್ಮ ಹಸ್ತ ಸ್ಪರ್ಶದಿಂದಲೇ ಅಸಂಖ್ಯಾತ ಭಕ್ತರ ಕಾಯಿಲೆಗಳನ್ನು ನಿವಾರಣೆ ಮಾಡಿದ್ದಾರೆ. ಬಳ್ಳಾರಿ, ಧಾರವಾಡ, ಮೈಸೂರು, ಹಂಪಸಾಗರ ಸೇರಿ ನಾಡಿನಾದ್ಯಂತ ಒಟ್ಟು 9 ಮಠಗಳನ್ನು ಸ್ಥಾಪಿಸಿದ್ದಾರೆ. ಈಗಲೂ ಬೇಡಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿಯ ಉಪನ್ಯಾಸಕಿ ಚೈತನ್ಯದೇವಿ ಗುದ್ನಯ್ಯನವರಮಠ ಮಾತನಾಡಿ, ಮಹಾದೇವ ತಾತನವರು ಬಾಲ್ಯದ ದಿನಗಳಿಂದಲೇ ಹಲವು ಲೀಲಾ ಪವಾಡಗಳನ್ನು ಮಾಡಿದ್ದಾರೆ. ಕಾಶಿ, ಹಿಮಾಲಯದಲ್ಲಿ ತಪಸ್ಸು ಮಾಡಿದ್ದ ತಾತನವರು ತಮ್ಮ ತಪಸ್ಸಿನ ಶಕ್ತಿಯನ್ನು ಭಕ್ತರ ಉದ್ಧಾರಕ್ಕೆ ವಿನಿಯೋಗಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಂಠ ಮಾತನಾಡಿ, ನಾನು ಕೂಡ ಹಲವು ವರ್ಷಗಳ ಹಿಂದೆ ಗಂಗಾವತಿಯಲ್ಲಿ ಮಹಾದೇವ ತಾತನವರ ದರ್ಶನ ಪಡೆದಿದ್ದೆ. ಅವರೊಬ್ಬ ಕಾರುಣ್ಯ ಮೂರ್ತಿಯಾಗಿದ್ದರು. ನಿಷ್ಕಲ್ಮಶ ಭಕ್ತಿ ಹೊಂದಿದ್ದ ಭಕ್ತರಿಗೆ ಮಾತ್ರ ದರ್ಶನ ನೀಡುತ್ತಿದ್ದರು ಎಂದರು.

ಧಾರವಾಡ ರುದ್ರಬಳಗದ ಅಧ್ಯಕ್ಷೆ ಗಿರಿಜಕ್ಕಾ ಶೆಟ್ಟರ ಮಾತನಾಡಿ, ತಾತನವರು ಇಂದಿಗೂ ಬೇಡಿ ಬಂದ ಭಕ್ತರಿಗೆ ಕಾಮಧೇನು ಆಗಿದ್ದಾರೆ. ಭಕ್ತಿಯಿಂದ ಬೇಡಿದರೆ ವರ ನೀಡುವ ಜ್ಞಾನಗುರುವಾಗಿದ್ದಾರೆ ಎಂದರು.

ಶಶಿಧರ ಜಿಗಜಿನ್ನಿ, ವೀರೇಶ ನಾಗಠಾಣ ಮತ್ತು ಪ್ರವೀಣ ಪತ್ತಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರಾವಣಿ ಬಿಜಾಪುರ ಭರತನಾಟ್ಯ ಪ್ರಸ್ತುತಪಡಿಸಿದರು.

ಕಾರ್ಯಕ್ರಮ ಸಂಘಟಕರಾದ ಸಿದ್ಧಲಿಂಗಪ್ಪ ಹೊಸಕೇರಿ, ಬಿವಿವಿ ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ಮಲ್ಲಪ್ಪಣ್ಣ ಅರಬ್ಬಿ, ಎ.ಎಸ್. ಪಾವಟೆ, ಸಂತೋಷ ಆನೆಗುಂದಿ, ಸಂತೋಷ ಇಂಗಳಹಳ್ಳಿ, ಮುರುಗೇಶ ಶಿನಗುತ್ತಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net