

ಬಾಗಲಕೋಟೆ: ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆಗಳಿಗೆ ಪರಿಹಾರ ನೀಡಬೇಕು ಹಾಗೂ ಕುರಿಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳ, ಕುರಿ ಸಾಕಣೆ ಸಹಕಾರ ಸಂಘದ ಆಶ್ರಯದಲ್ಲಿ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ನವನಗರದ ಕಾಳಿದಾಸ ವೃತ್ತದಿಂದ ಪ್ರತಿಭಟನಾ ಮೆರವಣಿ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಹಾಮಂಡಳದ ನಿರ್ದೇಶಕ ಭೀಮಪ್ಪ ಮೊಕಾಶಿ ಮಾತನಾಡಿ, ಕುರಿ ಮತ್ತು ಮೇಕೆ ಸಾಕಣೆೆಯಲ್ಲಿ ತೊಡಗಿರುವ ಕುರಿಗಾರರಿಗೆ ಆರ್ಥಿಕ ನೆರವು ನೀಡಬೇಕು. ಹಿಂದಿನ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದರು.
ಕುರಿಗಾರರಿಗೆ ಔಷಧಗಳನ್ನು ಕುರಿ ಸಂಘಗಳ ಮುಖಾಂತರ ವಿತರಿಸುವ ಪದ್ಧತಿ ಜಾರಿ ಮಾಡುವುದು. ಕುರಿಗಾರರಿಗೆ ಅರಣ್ಯದಲ್ಲಿ ಗಿಡ-ಮರಗಳಿಗೆ ಹಾನಿಯಾಗದಂತೆ ಹಾಗೂ ಅರಣ್ಯ ನಾಶವಾಗದಂತೆ ಕುರಿಗಳನ್ನು ಮೇಯಿಸಲು ಅನುಮತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ರಾಚು ಸೋಬಾನ, ಮಲ್ಲಪ್ಪ ವಾಲಿಕಾರ, ಭೀಮಣ್ಣ ಕೆಂಗಾರ ಸೇರಿ ಇತತರು ಪ್ರತಿಭಟನೆಯಲ್ಲಿ ಇದ್ದರು.
EndFragment